ಹೈದರಾಬಾದ್: ಸಮಾಜ ಸುಧಾರಕ ಹಾಗೂ 11ನೇ ಶತಮಾನದ ಸಂತ ಎನಿಸಿಕೊಂಡಿರುವ ರಾಮಾನುಜಾಚಾರ್ಯರ 1000 ನೇ ಜಯಂತಿ ನಿಮಿತ್ತ 216 ಅಡಿಯ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 5 ರಂದು ಲೋಕಾರ್ಪಣೆ ಮಾಡಲಿದ್ದಾರೆ.
ಚಿನ್ನ ಜೀಯಾರ್ ಸ್ವಾಮಿ ಅವರಿಂದ ನಿರ್ವಹಿಸಲ್ಪಡುವ ಈ ಚಿನ್ನ ಜೀಯರ್ ಆಶ್ರಮವು ವೈಷ್ಣವ ಧರ್ಮದ ತತ್ತ್ವ ಸಾರುವ ಕೆಲಸ ಮಾಡುತ್ತಿದೆ. ಶ್ರೀ ರಾಮಾನುಜರು ಪ್ರತಿ ಪಾದಿಸಿದ್ದ ವಿಶಿಷ್ಟಾದ್ವೈತ ಸಿದ್ಧಂತಾದ ಕುರಿತು ಜನರಿಗೆ ಅರಿವು ಮೂಡಿಸುತ್ತಿದೆ.
ಸಮಾನತೆಯ ಪ್ರತಿಮೆ : ಒಂದು ಸಾವಿರ ವರ್ಷಗಳ ಹಿಂದೆ ಸಾಮಾಜಿಕ ಸಮಾನತೆ ಪ್ರತಿಪಾದಿಸಿದ ಮಹಾನ್ ಸಮಾಜ ಸುಧಾರಕನಿಗೆ ಗೌರವ ಸಲ್ಲಿಸಿಸುವ ಉದ್ದೇಶದಿಂದ ಕುಳಿತ ಭಂಗಿಯಲ್ಲಿರುವ ಶ್ರೀ ರಾಮಾನುಜಾಚಾರ್ಯರ 216 ಅಡಿ ಎತ್ತರದ ಲೋಹದ ಪ್ರತಿಮೆಯನ್ನು ಮುಚಿಂತಲ್ನಲ್ಲಿ ಪ್ರಧಾನಿ ಮೋದಿ ಅನಾವರಣಗೊಳಿಸಲಿದ್ದಾರೆ.
ಇದಕ್ಕೆ ಸಮಾನತೆಯ ಪ್ರತಿಮೆ ಎಂದು ಹೆಸರಿಸಲಾಗಿದೆ. ಜಾತಿಭೇದ ಇಲ್ಲದೇ, ಮಾನವಸಂಕುಲದ ಉನ್ನತಿಗೆ ಕೆಲಸ ಮಾಡಿದ ರಾಮಾನುಜರ ನೆನಪಿಗೆ ಈ ಪ್ರತಿಮೆ ನಿರ್ಮಿಸಲಾಗಿದೆ.
108 ಮಾದರಿ ದೇವಾಲಯಗಳ ನಿರ್ಮಾಣ: ಮುಚಿಂತಲ್ ಆಶ್ರಮಕ್ಕೆ ತೆರಳುವ ಮಾರ್ಗದಲ್ಲಿ ಶ್ರೀ ರಾಮಾನುಜಾಚಾರ್ಯರ ಪ್ರತಿಮೆಯು ದೂರದಿಂದಲೇ ನೋಡುಗರನ್ನು ಅಕರ್ಷಿಸುತ್ತದೆ. ಪದ್ಮಪೀಠದ ಮೇಲೆ ಪದ್ಮಾಸನ ಭಂಗಿಯಲ್ಲಿ ಕುಳಿತಿರುವ ರಾಮಾನುಜರ ಪ್ರತಿಮೆ ಭಕ್ತಿ ಮತ್ತು ಶಾಂತತೆಯ ಭಾವವನ್ನು ಮೂಡಿಸುತ್ತಿದೆ.
ರಾಮಾನುಜರು ಎಲ್ಲರೂ ಸಮಾನರು ಎಂದು ಬೋಧಿಸುತ್ತಿರುವಂತೆ ಪ್ರತಿಮೆ ಕಂಡು ಬರುತ್ತದೆ. ಪ್ರತಿಮೆಯ ಜೊತೆಗೆ 108 ಮಾದರಿ ದೇವಾಲಯಗಳನ್ನು ಸಹ ನಿರ್ಮಿಸಲಾಗಿದೆ. ಈ ಸಮಾನತೆಯ ಪ್ರತಿಮೆಯನ್ನು 200 ಎಕರೆ ಭೂಮಿಯಲ್ಲಿ, ಹೈದರಾಬಾದ್ನ ಹೊರವಲಯದಲ್ಲಿ ಇರುವ ಶಂಶಾಬಾದ್ನ ಮುಚಿಂತಲ್ ಎಂಬಲ್ಲಿ ನಿರ್ಮಿಸಲಾಗಿದೆ.
ಫೆಬ್ರವರಿ 5 ರಂದು ಪ್ರತಿಮೆ ಅನಾವರಣ: ರಾಮಾನುಜಾಚಾರ್ಯರ 1000ನೇ ಜನ್ಮೋತ್ಸವವನ್ನು ಹೈದರಾಬಾದ್ನ ಶಂಶಾಬಾದ್ನ ಆಶ್ರಮದಲ್ಲಿ ರಾಮಾನುಜರ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುತ್ತದೆ. ಫೆಬ್ರವರಿ 2 ರಿಂದ ಫೆಬ್ರವರಿ 14 ರವರೆಗೆ ಇಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ಈ 2 ವಾರಗಳ ಉತ್ಸವಗಳಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಿ ಜೊತೆಗೆ ವಿವಿಧ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಫೆ.2 ರಂದು ಸಂಭ್ರಮಕ್ಕೆ ತೆರೆ ಬಿದ್ದರೆ, 3ರಂದು ಅಗ್ನಿ ಪ್ರತಿಷ್ಠೆ ಕಾರ್ಯ ನಡೆಯಲಿದೆ. ಫೆಬ್ರವರಿ 5 ರಂದು ಪ್ರಧಾನಿ ಮೋದಿ ಸಮಾನತೆಯ ಪ್ರತಿಮೆ ಅನಾವರಣಗೊಳಿಸಲಿದ್ದಾರೆ.
ಫೆ.8ರಂದು ಸಾಮೂಹಿಕ ಉಪನಯನ, 11ರಂದು ಸಾಮೂಹಿಕ ಉಪನಯನ, ಫೆ.12ರಂದು ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ, ಬಳಿಕ ಫೆ.13ರಂದು ಚಿನ್ನದ ಮೂರ್ತಿ, ಪ್ರತಿ ದಿನ ವೈದಿಕ, ಶಾಸ್ತ್ರಗಳು ನಡೆಯಲಿದ್ದು, ಫೆ.8 ರಂದು ಆದಿತ್ಯ ಹೃದಯ ಶ್ಲೋಕ ಸಾಮೂಹಿಕ ಪಠಣ ನಡೆಯಲಿದೆ.
ಈ ವಿಗ್ರಹ ತಯಾರಿಕೆಗೆ 120 ಕಿಲೋಗ್ರಾಂ ಚಿನ್ನವನ್ನು ಸಹ ಬಳಸಲಾಗಿದೆ. ಫೆ.13ಕ್ಕೆ ಪ್ರಮುಖ ಕಾರ್ಯಕ್ರಮಗಳು ಮುಕ್ತಾಯವಾಗಲಿದ್ದು, ಫೆ.14ರಂದು ಮಹಾ ಪೂರ್ಣಾಹುತಿ ಮೂಲಕ ಸಮಾರಂಭವನ್ನು ಮುಕ್ತಾಯಗೊಳಿಸುವುದಾಗಿ ಸಂಘಟಕರು ತಿಳಿಸಿದ್ದಾರೆ.
ತೆಲಂಗಾಣ ಸರ್ಕಾರದ ಜವಾಬ್ದಾರಿ: ಸಮಾನತೆಯ ಪ್ರತಿಮೆಯ ಜೊತೆಗೆ ದಿವ್ಯ ಸಾಕೇತಂನಲ್ಲಿ 108 ಮಾದರಿ ದೇವಾಲಯಗಳನ್ನು ನಿರ್ಮಿಸಲಾಗಿದೆ. ಈ ದೇವಾಲಯಗಳಲ್ಲಿ ಶಾಂತಿಕಲ್ಯಾಣಂ ನಡೆಯಲಿದ್ದು, ನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.
ಗಣ್ಯರ ಭೇಟಿಗೂ ಮುನ್ನ ಆಶ್ರಮಕ್ಕೆ ಸಂಪರ್ಕ ಕಲ್ಪಿಸುವ ಹಾಗೆ ಹೊಸ ರಸ್ತೆಗಳನ್ನು ಹಾಕಲಾಗುತ್ತಿದೆ. ಹೈದರಾಬಾದ್‌ಗೆ ಹೊಸ ರೂಪವನ್ನು ನೀಡುತ್ತಿರುವ ಈ ಪ್ರತಿಮೆ ಅನಾವರಣದ ಕೆಲ ಜವಾಬ್ದಾರಿಗಳನ್ನು ತೆಲಂಗಾಣ ಸರ್ಕಾರ ಹೊತ್ತುಕೊಂಡಿದೆ.
ನಿನ್ನೆ ಮುಖ್ಯಮಂತ್ರಿ ಕೆಸಿಆರ್ ಅವರು ದಿವ್ಯ ಸಾಕೇತಂಗೆ ಭೇಟಿ ನೀಡಿ, ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ವಿಚಾರಿಸಿ, ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ