ಪುಣೆ (ಮಹಾರಾಷ್ಟ್ರ) : ನಾವು ಯಾವಾಗಲೂ ಪತ್ರಿಕಾ ಸ್ವಾತಂತ್ರ್ಯವನ್ನು ಬಯಸುತ್ತೇವೆ. ಮಾಧ್ಯಮಗಳು ಕೂಡ ತಮ್ಮ ಕರ್ತವ್ಯದ ಕುರಿತು ಜವಾಬ್ದಾರಿ ಹೊಂದಿರಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಗಣರಾಜ್ಯೋತ್ಸವ ದಿನದಂದು ಆಯೋಜಿಸಲಾಗಿದ್ದ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರದ ಕುರಿತು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿರುವುದನ್ನು ಉಲ್ಲೇಖಿಸಿದ ಜಾವಡೇಕರ್, ವದಂತಿಗಳನ್ನು ಹರಡುವುದು ಪತ್ರಿಕಾ ಸ್ವಾತಂತ್ರ್ಯದ ಭಾಗವಲ್ಲ ಎಂದಿದ್ದಾರೆ.
ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ನಾನು ಪ್ರಸಾರ ಖಾತೆ ಸಚಿವನಾಗಿರುವುದರಿಂದ ಯಾವಾಗಲೂ ಮಾಧ್ಯಮ ಸ್ವಾತಂತ್ರ್ಯವನ್ನು ಬಯಸುತ್ತೇನೆ. ಮಾಧ್ಯಮಗಳು ಯಾವಾಗಲೂ ಸ್ವತಂತ್ರವಾಗಿರಬೇಕು. ಹಾಗೆಯೇ, ತಮ್ಮ ಕರ್ತವ್ಯದ ಬಗ್ಗೆಯೂ ಜವಾಬ್ದಾರರಾಗಿರಬೇಕು ಎಂದು ಹೇಳಿದರು.
ಓದಿ : ಜೈಲಿನಿಂದ ಮುನಾವರ್ ಫಾರೂಕಿ ಬಿಡುಗಡೆ: ನ್ಯಾಯ ಸಿಕ್ಕೇ ಸಿಗುತ್ತದೆ ಎಂದ ಹಾಸ್ಯ ಕಲಾವಿದ
ಸತ್ಯವನ್ನು ಪರಿಶೀಲಿಸಲು ಮತ್ತು ಪ್ರತಿಕ್ರಿಯಿಸಲು ಸಚಿವರು ಮಾಧ್ಯಮಗಳಿಗೆ ಸಲಹೆ ನೀಡಿದರು. ಯಾರಾದರೂ ಸರ್ಕಾರವನ್ನು ಟೀಕಿಸಿದರೆ ನಾವು ಅವರನ್ನು ಎಂದಿಗೂ ವಿರೋಧಿಸುವುದಿಲ್ಲ, ಸ್ವಾಗತಿಸುತ್ತೇವೆ ಎಂದು ಎಂದರು.
'ಟೂಲ್‌ಕಿಟ್' ಪ್ರಕರಣದ ಕುರಿತು ಮಾತನಾಡಿದ ಜಾವಡೇಕರ್, ಆ ಸಂಸ್ಥೆಯ ಸಂಪೂರ್ಣ ಯೋಜನೆ ಮತ್ತು ಅವರು ಭಾರತವನ್ನು ದೂಷಿಸಲು ಹೇಗೆ ಯೋಜನೆ ಮಾಡಿದ್ದಾರೆ ಎಂಬುವುದರ ಬಗ್ಗೆ ನಮಗೆ ತಿಳಿದಿದೆ. ಅದರ ಸಂಪೂರ್ಣ ಡೇಟಾವನ್ನ ನಾವು ಸಂಗ್ರಹಿಸಿದ್ದೇವೆ ಎಂದರು.