ನವದೆಹಲಿ: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅವರೇ ಮುಂದುವರೆಯಲಿದ್ದಾರೆ. ಭಾನುವಾರ ನಡೆದ ಪಕ್ಷದ ಕಾರ್ಯಕಾರಿಣಿ ಸಮಿತಿ ಸಭೆಯ ಬಳಿಕ ಈ ನಿರ್ಧಾರ ಹೊರಬಿದ್ದಿದೆ.
ಪಂಚ ರಾಜ್ಯ ಚುನಾವಣೆಯಲ್ಲಿ ಹೀನಾಯ ಸೋಲಿನ ಬಗ್ಗೆ ಪರಾಮರ್ಶೆ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ನಡೆಸಲಾಯಿತು. ಸಭೆ ಬಳಿಕ ಮಾತನಾಡಿದ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿ ಅವರೇ ಮುಂದುವರೆಯುವ ಬಗ್ಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಾದ ಸೋನಿಯಾ ಗಾಂಧಿ ನೇತೃತ್ವವನ್ನು ಎಲ್ಲ ನಾಯಕರು ಒಪ್ಪಿಕೊಂಡಿದ್ದಾರೆ. ಅವರೇ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ. ಅವರ ನಾಯಕತ್ವದಲ್ಲೇ ನಾವೆಲ್ಲರೂ ವಿಶ್ವಾಸ ಹೊಂದಿದ್ದೇವೆ ಎಂದು ಖರ್ಗೆ ಹೇಳಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಮಾತನಾಡಿ, ಸೋನಿಯಾ ಗಾಂಧಿ ನಾಯಕತ್ವವನ್ನು ಕಾರ್ಯಕಾರಣಿ ಸಮಿತಿ ಸಭೆಯು ಸರ್ವಾನುಮತದಿಂದ ಮತ್ತೆ ಅನುಮೋದಿಸಿದೆ. ಮುಂದಿನ ಸಮಯದವರೆಗೆ ಸೋನಿಯಾ ಅವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದಿದ್ದಾರೆ.
ಸೋನಿಯಾ ಅವರು ಪಕ್ಷ ಪುನಶ್ಚೇತನಗೊಳಿಸುವ ಕ್ರಮಗಳನ್ನು ಶೀಘ್ರದಲ್ಲೇ ಪರಿಚಯಿಸಲಿದ್ದಾರೆ. ಸಂಸತ್ತಿನ ಬಜೆಟ್ ಅಧಿವೇಶನದ ನಂತರ 'ಚಿಂತನ್ ಶಿವರ್' (ಕಾರ್ಯತಂತ್ರ ರೂಪಿಸುವ ಕಾರ್ಯಕ್ರಮ) ನಡೆಯಲಿದೆ. ಇದಕ್ಕೂ ಮುನ್ನ ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಪಕ್ಷದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಕುರಿತು ಚರ್ಚೆ ನಡೆಸಲಾಯಿತು. ಮುಂಬರುವ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲು ತೀರ್ಮಾನಿಸಲಾಯಿತು ಎಂದು ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರಾಜೀನಾಮೆಗೆ ಸಿದ್ಧ: ಪಕ್ಷದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಸೋನಿಯಾ ಗಾಂಧಿ ಮಾತನಾಡುತ್ತಾ, ನಾವು ಮೂರು ಜನರು ಕೂಡ (ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ) ರಾಜೀನಾಮೆ ನೀಡಲು ಸಿದ್ಧರಿದ್ದೇವೆ ಎಂದಿದ್ದರು. ಆದರೆ, ಕಾರ್ಯಕಾರಿಣಿ ಸಮಿತಿ ಈ ನಿರ್ಧಾರವನ್ನು ತಿರಸ್ಕರಿಸಿತು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: 'ದಿ ಕಾಶ್ಮೀರ ಫೈಲ್ಸ್': ಮೂರು ರಾಜ್ಯಗಳಲ್ಲಿ ತೆರಿಗೆ ರಹಿತ ಪ್ರದರ್ಶನಕ್ಕೆ ಅವಕಾಶ