ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೂರು ವಾರಗಳ ಸಮಯ ಕೇಳಿದ್ದಾರೆ. ಇತ್ತೀಚೆಗಷ್ಟೇ ಕೋವಿಡ್‌ಗೆ ತುತ್ತಾಗಿರುವ ಸೋನಿಯಾ ಗಾಂಧಿ ಐಸೋಲೇಷನ್ನಲ್ಲಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ಜಾರಿ ಮಾಡಿತ್ತು.
ಈ ಸಂಬಂಧ ಅವರು ನಿನ್ನೆ ಅಂದರೆ ಬುಧವಾರ ದೆಹಲಿಯ ಇಡಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಬೇಕಿತ್ತು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಕೋವಿಡ್‌ಗೆ ತುತ್ತಾಗಿರುವ ಸೋನಿಯಾ ಗಾಂಧಿ ಐಸೋಲೇಷನ್ಗೆ ಒಳಗಾಗಿದ್ದು, ಕೋವಿಡ್ ನೆಗೆಟಿವ್ ವರದಿ ಬಂದಿಲ್ಲದ ಹಿನ್ನೆಲೆಯಲ್ಲಿ ಹಾಗೂ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಅವರು ವಿನಾಯಿತಿ ಕೋರಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಸಂಬಂಧ ಅವರು, ಜೂನ್ 2 ಮತ್ತು ಜೂನ್ 7 ರ ವೈದ್ಯಕೀಯ ವರದಿಗಳನ್ನು ಇಡಿಗೆ ನೀಡಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ಮೂರು ವಾರಗಳ ಸಮಯ ಕೇಳಿದ್ದಾರೆ. ಈ ಮಧ್ಯೆ, ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಅವರಿಗೆ ಜೂನ್ 13 ರಂದು ತನಿಖೆಗೆ ಹಾಜರಾಗುವಂತೆ ಇಡಿ ಮತ್ತೊಂದು ಸಮನ್ಸ್ ಜಾರಿ ಮಾಡಿದೆ.
ಇದು ರಾಜಕೀಯ ಸೇಡು: ಈ ನಡುವೆ ಇಡಿ ನೀಡಿರುವ ಸಮನ್ಸ್ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ. ಇದೊಂದು ರಾಜಕೀಯ ಸೇಡು ಎಂದು ಕಿಡಿಕಾರಿದೆ. ನಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿಲ್ಲ. ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಇನ್ನು ಕಳೆದ ಏಪ್ರಿಲ್ನಲ್ಲೇ ಇಡಿ ಕಾಂಗ್ರೆಸ್ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹಾಗೂ ಪವನ್ ಬನ್ಸಾಲ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಇಡಿ ಇಬ್ಬರೂ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ನ್ಯಾಷನಲ್ ಹೆರಾಲ್ಡ್ ಅನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಪ್ರಕಟಿಸಿದೆ ಮತ್ತು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ (YIL) ಒಡೆತನದಲ್ಲಿದೆ. ಖರ್ಗೆ ವೈಐಎಲ್‌ನ ಸಿಇಒ ಆಗಿದ್ದರೆ, ಬನ್ಸಾಲ್ ಎಜೆಎಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ YIL ಪ್ರವರ್ತಕರಾಗಿದ್ದಾರೆ.
ಕೇಸ್ ದಾಖಲಿಸಿದ್ಯಾರು: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ನಾಷನಲ್ ಹೆರಾಲ್ಡ್ನಲ್ಲಿ ಗಾಂಧಿ ಕುಟುಂಬ ಹಣ ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪಿಸಿದ್ದರು. ಈ ಸಂಬಂಧ ಅವರು, ದೆಹಲಿ ನ್ಯಾಯಾಲಯಕ್ಕೆ ದೂರು ಕೂಡಾ ನೀಡಿದ್ದರು.
ಇದನ್ನು ಓದಿ: ಗಾಯಕ ಸಿಧು ಮೂಸೆವಾಲಾ ಕೊಲೆ ಹಿಂದಿನ ಮಾಸ್ಟರ್ ಮೈಂಡ್ ಲಾರೆನ್ಸ್ ಬಿಷ್ಣೋಯಿ?