ಅನಂತನಾಗ್(ಜಮ್ಮು ಕಾಶ್ಮೀರ್): ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೆಹ್ರಿಬಲ್ ಗ್ರಾಮದಲ್ಲಿ ಯುವಕನೊಬ್ಬ ಹೆತ್ತ ತಾಯಿಯನ್ನೇ ಹತ್ಯೆಗೈದಿದ್ದಾನೆ. ಅಲ್ಲದೇ ಕೊಲೆ ಆರೋಪವನ್ನು ತಂದೆ ಮತ್ತು ಸಂಬಂಧಿಕರ ಮೇಲೆ ಹೊರಿಸಲು ಯತ್ನಿಸಿದ್ದಾನೆ. ಆದರೆ, ಈತನ ಅಸಮಂಜಸ ಹೇಳಿಕೆಗಳು ಆತನ ನಿಜ ಬಣ್ಣವನ್ನು ಬಯಲು ಮಾಡಿವೆ.
ಅಕ್ಟೋಬರ್ ಕೊನೆಯ ವಾರದಲ್ಲಿ ಕೊಲೆ ನಡೆದಿದ್ದರೂ ಹಲವು ದಿನಗಳಿಂದ ಪೊಲೀಸರಿಗೆ ಪ್ರಕರಣದ ಸುಳಿವು ಸಿಕ್ಕಿರಲಿಲ್ಲ. ಮೃತರ ಮಗನನ್ನು ನಿರಂತರ ವಿಚಾರಣೆ ನಡೆಸಿದಾಗ ಮಹಿಳೆಯ ಮಗ ತನ್ನ ಆಪ್ತ ಸ್ನೇಹಿತನ ಸಹಾಯದಿಂದ ತಾಯಿಯನ್ನು ಕೊಂದಿರುವ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ವಿವರ: 45 ವರ್ಷದ ರಜಿಯಾ ಅಖ್ತರ್ ಎಂಬ ಮಹಿಳೆ ತನ್ನ ಮನೆಯ ಟೆರೆಸ್ನಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಆದರೆ ರಜಿಯಾ ಅವರ ಮಗ ತಾಯಿಯನ್ನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ತಂದೆ ಮತ್ತು ಹತ್ತಿರದ ಸಂಬಂಧಿಕರ ವಿರುದ್ಧ ದೂರು ನೀಡಿದ್ದ. ರಜಿಯಾ ವಿಚ್ಛೇದನ ಪಡೆದಿದ್ದು, ಅವರ ಪತಿ ಇತ್ತೀಚೆಗೆ ಮರು ಮದುವೆಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಲಂಕಷ ತನಿಖೆ ಆರಂಭಿಸಿದ್ದರು.
ಮಹಿಳೆ ಟೆರಸ್ ಮೇಲಿಂದ ಬಿದ್ದು ಸಾವನ್ನಪ್ಪಿಲ್ಲ. ಬದಲಾಗಿ ಅವರ ಮಗ ತನ್ನ ಸ್ನೇಹಿತರೊಬ್ಬರ ಸಹಾಯದಿಂದ ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಪೊಲೀಸರ ಪ್ರಕಾರ, 'ಮೃತ ಮಹಿಳೆಯ ಮಗ ಅಖೀಬ್ ಮಂಜೂರ್ ಖಾನ್, ತನ್ನ ಸ್ನೇಹಿತ ಅಬಿದ್ ಹುಸೇನ್ ಗಣಾಯಿ ಸಹಾಯದಿಂದ ಅಡುಗೆ ಮನೆಯಲ್ಲಿ ತಾಯಿಯಿಂದ ಹಣ ಸುಲಿಗೆ ಮಾಡಲು ಪ್ರಯತ್ನಿಸಿದ್ದಾರೆ. ಆ ವೇಳೆ ತಾಯಿ ಕೆಳಗೆ ಬಿದ್ದಿದ್ದಾರೆ. ಬಳಿಕ ತಾಯಿಯ ತಲೆಗೆ ಕಲ್ಲಿನಿಂದ ಹೊಡೆದು ಹತ್ಯೆಗೈದಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಆರೋಪಿಗಳಿಬ್ಬರನನ್ನು ಬಂಧಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕೇವಲ 950 ರೂಪಾಯಿ ಸಾಲ ಮರುಪಾವತಿಸದ್ದಕ್ಕೆ ಯುವಕನ ಮೇಲೆ ಆ್ಯಸಿಡ್ ದಾಳಿ