ರಾಯ್ಪುರ್(ಛತ್ತೀಸ್ಗಢ): ವಿವಿಧ ವಿಷಯ, ಜನಪ್ರಿಯ ವ್ಯಕ್ತಿ, ವಿದ್ವಾಂಸರ ಮೇಲೆ ಪಿಹೆಚ್ಡಿ ಮಾಡುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊಬ್ಬ ಮಗ ತನ್ನ ತಂದೆಯ ಜೀವನಾಧರಿಸಿ ಸಂಶೋಧನೆ ಮಾಡಲು ಮುಂದಾಗಿದ್ದು, ಕೆಲ ದಿನಗಳಲ್ಲೇ ಪ್ರಬಂಧ ಮಂಡನೆ ಮಾಡಲಿದ್ದಾರೆ. ಛತ್ತೀಸ್ಗಢದ ರಾಜಧಾನಿ ರಾಯ್ಪುರ್ದಲ್ಲಿ ವಾಸವಾಗಿರುವ ಹೇಮಚಂದ್ರ ಜಂಗ್ಡೆ ತಮ್ಮ ತಂದೆ ದಿವಂಗತ ರೇಷ್ಮಾಲಾಲ್ ಜಂಗಡೆ ಮೇಲೆ ಪಿಹೆಚ್ಡಿ ಮಾಡ್ತಿದ್ದಾರೆ.
ಭಾರತದ ಮೊದಲ ಲೋಕಸಭೆಗೆ ಆಯ್ಕೆಯಾಗಿದ್ದ ಹಿರಿಯ ರಾಜಕಾರಣಿ ರೇಷ್ಮಾಲಾಲ್ ಜಂಗಡೆ, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅವರ ಮಗ ಹೇಮಚಂದ್ರ ಜಂಗಡೆ ಇದೀಗ ತಮ್ಮ ತಂದೆಯ ಜೀವನದ ವಿವಿಧ ವಿಚಾರಗಳನ್ನಿಟ್ಟುಕೊಂಡು ಪಿಹೆಚ್ಡಿ ಮಾಡ್ತಿದ್ದಾರೆ.
ರವಿಶಂಕರ್ ಶುಕ್ಲಾ ವಿಶ್ವವಿದ್ಯಾಲಯದಿಂದ ಈ ಸಂಶೋಧನೆ ಮಾಡ್ತಿದ್ದು, ಇದೇ ತಿಂಗಳು ಪೂರ್ಣಗೊಳ್ಳಲಿದೆ ಎಂದು ಹೇಮಚಂದ್ರ ಈಟಿವಿ ಭಾರತ್ಗೆ ತಿಳಿಸಿದ್ದಾರೆ.2014ರಲ್ಲಿ ರೇಷ್ಮಾಲಾಲ್ ಜಂಗಡೆ ತೀರಿಕೊಂಡಿದ್ದು, ಅವರು ಮಾಡಿರುವ ಸಾಮಾಜಮುಖಿ ಕೆಲಸಗಳ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಹೇಮಚಂದ್ರ ಹೇಳಿದ್ದಾರೆ.
ಇದನ್ನೂ ಓದಿ: 'ಯಾರು ಹೇಳಿದ್ದು ಸಂಸತ್ತು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು?': ಶಶಿ ತರೂರ್ ಅವರನ್ನೊಮ್ಮೆ ನೋಡಿ!
ನಮ್ಮ ತಂದೆ ರೇಷ್ಮಾಲಾಲ್ ತಮ್ಮ ಇಡೀ ಜೀವನವನ್ನು ಬಡವರು, ದೀನದಲಿತ, ಶೋಷಿತ ಮಕ್ಕಳ ಉನ್ನತಿಗಾಗಿ ಮುಡಿಪಾಗಿಟ್ಟಿದ್ದು, 2016ರಿಂದ ಅವರ ಮೇಲೆ ಸಂಶೋಧನೆ ಮಾಡಲು ಮುಂದಾಗಿದ್ದೇನೆ. ಕೋವಿಡ್ನಿಂದಾಗಿ ಮಾಹಿತಿ ಕಲೆ ಹಾಕಲು ಸ್ವಲ್ಪ ವಿಳಂಬವಾಯಿತು ಎಂದಿದ್ದಾರೆ. ರೇಷ್ಮಾಲಾಲ್ 1950ರಿಂದ 1991ರವರೆಗೆ ನಾಲ್ಕು ಸಲ ಸಂಸದರಾಗಿ ಆಯ್ಕೆಯಾಗಿದ್ದು,ಅನೇಕ ರೀತಿಯ ಜನಪ್ರಿಯ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದು, ಸಾಧ್ಯವಾದ ಎಲ್ಲ ಮಾಹಿತಿ ಕಲೆ ಹಾಕಲು ಪ್ರಯತ್ನಿಸಿದ್ದೇನೆ ಎಂದಿದ್ದಾರೆ.