ನವದೆಹಲಿ: ಭಾರತೀಯ ವಾಯುಪಡೆಯ (ಐಎಎಫ್) ಸಾಮರ್ಥ್ಯ ಇನ್ನಷ್ಟು ಬಲಪಡಿಸಲು ಮತ್ತೆ ಮೂರು ರಫೇಲ್ ಫೈಟರ್ ಜೆಟ್ಗಳು ಫ್ರಾನ್ಸ್‌ನಿಂದ ಭಾರತಕ್ಕೆ ಬಂದಿಳಿದಿವೆ.
ಫ್ರಾನ್ಸ್‌ನಿಂದ ಬಂದ ಆರನೇ ಬ್ಯಾಚ್ನ ವಿಮಾನಗಳು ಇದಾಗಿದ್ದು, ಪಶ್ಚಿಮ ಬಂಗಾಳದ ಹಶಿಮರಾದಲ್ಲಿ ರಫೇಲ್ ಜೆಟ್ಗಳ ಹಾರಾಟ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ಐಎಎಫ್ ಮೂಲಗಳು ತಿಳಿಸಿವೆ.
2016ರಲ್ಲಿ ಭಾರತವು, ಫ್ರಾನ್ಸ್ ನಿರ್ಮಿತ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿತ್ತು. 2020ರ ಜುಲೈ 29ರಂದು ಮೊದಲ ಬ್ಯಾಚ್ನಲ್ಲಿ ಐದು ಜೆಟ್ಗಳು ದೇಶಕ್ಕೆ ಆಗಮಿಸಿದ್ದವು. ನವೆಂಬರ್ 3ರಂದು ಎರಡನೇ ಬ್ಯಾಚ್ನ ಮೂರು ಜೆಟ್, 2021 ಜನವರಿ 28ರಂದು ಮೂರನೇ ಬ್ಯಾಚ್ನ ಮೂರು ವಿಮಾನಗಳು, ಏಪ್ರಿಲ್ 1ರಂದು ನಾಲ್ಕನೇ ಬ್ಯಾಚ್ನ ಮೂರು ಹಾಗೂ ಏಪ್ರಿಲ್ 22ರಂದು ಐದನೇ ಬ್ಯಾಚ್ನ ನಾಲ್ಕು ವಿಮಾನಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು.
ಇದನ್ನೂ ಓದಿ: ಲೇಹ್ಗೆ IAF ಮುಖ್ಯಸ್ಥ ಆರ್.ಕೆ.ಎಸ್. ಭದೌರಿಯಾ ಭೇಟಿ, ಪರಿಶೀಲನೆ
ಆಕಾಶದಲ್ಲಿ ಹಾರುತ್ತಿರುವಾಗಲೇ ಶತ್ರುಗಳನ್ನು ಸದೆಬಡಿಯುವ ಸಾಮರ್ಥ್ಯ ರಫೇಲ್ ಯುದ್ಧ ವಿಮಾನಗಳಿಗಿದೆ. 'ಏರ್ ಟು ಏರ್' ಅಂದರೆ ಬಾನಿನಲ್ಲೇ ಶತ್ರು ಸೇನೆಯ ವಿಮಾನಗಳ ಮೇಲೆ ಬಾಂಬ್ ದಾಳಿ ಮಾಡುವ ಜೊತೆಗೆ 'ಏರ್ ಟು ಅರ್ತ್' ಅಂದರೆ ಆಕಾಶದಿಂದ ಭೂಮಿಯ ಮೇಲಿರುವ ಶತ್ರು ಪಡೆಯ ಮೇಲೂ ಬಾಂಬ್ ಹಾಕುವ ಸಾಮರ್ಥ್ಯವನ್ನು ಈ ಯುದ್ಧ ವಿಮಾನಗಳು ಹೊಂದಿವೆ.