ನಾಗಾಂವ್(ಅಸ್ಸೋಂ): ಸೆಂಟ್ರಲ್ ಅಸ್ಸೋಂನ ನಾಗಾಂವ್ ಜಿಲ್ಲೆಯ ಕಾಲಿಯಾಬಾರ್ನಲ್ಲಿ ಘೋರ ಘಟನೆಯೊಂದು ನಡೆದಿದೆ. ಮೂವರು ಅಪ್ರಾಪ್ತರು ತಮ್ಮೊಂದಿಗೆ ಅಶ್ಲೀಲ ವಿಡಿಯೋ ನೋಡಿಲ್ಲವೆಂದು ಆರು ವರ್ಷದ ಬಾಲಕಿಯನ್ನು ದಾರುಣವಾಗಿ ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಬಾಲಾಪರಾಧಿಗಳೊಬ್ಬರ ಪೈಕಿಯ ತಂದೆಗೆ ಈ ದಾರುಣ ಘಟನೆ ಬಗ್ಗೆ ತಿಳಿದಿದ್ರೂ ಸಹ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನಾಗಾಂವ್ ಜಿಲ್ಲೆಯ ಪೊಲೀಸರು ತನಿಖೆಯ ಬಳಿಕ ಬಾಲಕಿಯನ್ನು ಕೊಂದ ಮೂವರು ಬಾಲಾಪರಾಧಿಗಳನ್ನು ಬಂಧಿಸಿದ್ದಾರೆ. ಅಪರಾಧಿಗಳ ವಯಸ್ಸು ಇಬ್ಬರಿಗೆ 11 ವರ್ಷವಾಗಿದ್ದು, ಮತ್ತೊಬ್ಬ 8 ವರ್ಷದವನಾಗಿದ್ದಾನೆ. ಈ ಘಟನೆಯನ್ನು ಮರೆಮಾಚಲು ಯತ್ನಿಸಿದ ಬಾಲಕನ ತಂದೆಯನ್ನೂ ಸಹ ಪೊಲೀಸರು ಬಂಧಿಸಿದ್ದಾರೆ.
ಇದೊಂದು ದುರದೃಷ್ಟಕರ ಘಟನೆ. ಆರೋಪಿಯೊಬ್ಬರ ತಂದೆಗೆ ಈ ಕೃತ್ಯದ ಬಗ್ಗೆ ತಿಳಿದಿದ್ದರೂ ಅದನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ನಾಗಾಂವ್ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಮಿಶ್ರಾ ಹೇಳಿದ್ದಾರೆ.
ಆರು ವರ್ಷದ ಬಾಲಕಿಯನ್ನು ಮೂವರು ಅಪ್ರಾಪ್ತರು ಕೊಂದಿರುವುದು ಅತ್ಯಂತ ದುರದೃಷ್ಟಕರ. ಪೋಷಕರು ತಮ್ಮ ಮಕ್ಕಳ ಬಗ್ಗೆ ನಿಗಾವಹಿಸಬೇಕು. ಈ ಘಟನೆ ನಮಗೆಲ್ಲರಿಗೂ ಎಚ್ಚರಿಕೆ ನೀಡುತ್ತದೆ. ಆ ಬಾಲಕರು ಬಳಸಿದ ಮೊಬೈಲ್ ಫೋನ್ ಅನ್ನು ನಾವು ವಶಪಡಿಸಿಕೊಂಡಿದ್ದೇವೆ. ಈ ಮೊಬೈಲ್ ಫೋನ್ ಆರೋಪಿಯೊಬ್ಬರ ತಂದೆಯದ್ದಾಗಿದೆ. ನಾವು ಫೋನ್ ಅನ್ನು ಪರಿಶೀಲಿಸಿದಾಗ ಅಲ್ಲಿ ಕೇವಲ ಅಶ್ಲೀಲತೆ ವಿಡಿಯೋಗಳು ಮಾತ್ರ ಇದ್ವು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಮೂವರು ದಿನನಿತ್ಯ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದರು. ಆ ದಿನ ಮಧ್ಯಾಹ್ನ ಸಹ ಅಶ್ಲೀಲ ವಿಡಿಯೋ ನೋಡುತ್ತಿದ್ದರು. ಆ ವೇಳೆ ಹುಡುಗಿಗೆ ಅಶ್ಲೀಲ ವಿಡಿಯೋ ನೋಡಲು ಹೇಳಿದರು. ಆಕೆ ವಿಡಿಯೋ ನೋಡಲು ನಿರಾಕರಿಸಿದಳು. ಇದರಿಂದ ಕುಪಿತರಾದ ಆ ಮೂವರು ಬಾಲಕರು ಆಕೆ ಮೇಲೆ ದಾಳಿ ಮಾಡಿ ಕಲ್ಲುಗಳಿಂದ ಹೊಡೆದು ಬರ್ಬರವಾಗಿ ಕೊಂದರು. ನಂತರ ಬಾಲಕಿಯ ಶವವನ್ನು ಆ ಪ್ರದೇಶದ ಶೌಚಾಲಯದ ಹಿಂದೆ ಎಸೆದು ಪರಾರಿಯಾಗಿದ್ದರು. ಬಳಿಕ ತನಿಖೆ ಕೈಗೊಂಡಾಗ ಆರೋಪಿಗಳು ಸೆರೆ ಸಿಕ್ಕರು ಎಂದು ಪೊಲೀಸರು ವಿವರಿಸಿದ್ದಾರೆ.
ಈ ಮೂವರು ಬಾಲಾಪರಾಧಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು ಬಾಲ ಮಂದಿರಕ್ಕೆ ಕಳುಹಿಸುವ ಸಾಧ್ಯತೆಯಿದೆ ಎಂದು ಎಸ್ಪಿ ಮಿಶ್ರಾ ಹೇಳಿದ್ದಾರೆ.