ನವದೆಹಲಿ: 2022ರಲ್ಲಿ ದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂಬ ಅಂಶವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿ ಬಹಿರಂಗಪಡಿಸಿದೆ. 2022ರಲ್ಲಿ 4,45,256 ಪ್ರಕರಣಗಳು ದಾಖಲಾಗಿದ್ದು, 2021ಕ್ಕೆ ಹೋಲಿಸಿದರೆ ಶೇ 4ರಷ್ಟು ಏರಿಕೆಯಾಗಿದೆ. 2021ರಲ್ಲಿ 4,28,278 ಪ್ರಕರಣಗಳು ದಾಖಲಾಗಿದ್ದವು.
2022ರಲ್ಲಿ 250 ಮಹಿಳೆಯರು ಅತ್ಯಾಚಾರ, ಕೊಲೆ ಅಥವಾ ಗ್ಯಾಂಗ್ ರೇಪ್ಗೆ ಒಳಗಾಗಿದ್ದಾರೆ. ವರದಕ್ಷಿಣೆ ಕಿರುಕುಳದಿಂದ 6,516 ಮಂದಿ ಸಾವನ್ನಪ್ಪಿದರೆ, 4,963 ಮಂದಿ ಮಹಿಳೆಯರಿಗೆ ಪ್ರಚೋದನೆಯಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿ ಹೇಳುತ್ತದೆ.
ಉತ್ತರ ಪ್ರದೇಶದಲ್ಲಿ ಮಹಿಳೆಯರ ವಿರುದ್ಧ ಅತಿ ಹೆಚ್ಚು ಅಂದರೆ 65,743 ಪ್ರಕರಣ ದಾಖಲಾದರೆ, ಮಹಾರಾಷ್ಟ್ರದಲ್ಲಿ 45,331, ರಾಜಸ್ಥಾನದಲ್ಲಿ 45,058, ಪಶ್ಚಿಮ ಬಂಗಾಳದಲ್ಲಿ 34,378 ಮತ್ತು ಮಧ್ಯ ಪ್ರದೇಶದಲ್ಲಿ 32,765 ಪ್ರಕರಣಗಳು ವರದಿಯಾಗಿವೆ.
ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿಯಲ್ಲಿ ಅತಿ ಹೆಚ್ಚು 14,247 ಪ್ರಕರಣಗಳು ದಾಖಲಾದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ 3,716 ಮತ್ತು ಚಂಢೀಗಢದಲ್ಲಿ 325 ಪ್ರಕರಣ ದಾಖಲಾಗಿವೆ.
2022ರಲ್ಲಿ ಮಹಿಳೆಯರ ಅಪಹರಣ ಪ್ರಕರಣಗಳು 69,677 ಬೆಳಕಿಗೆ ಬಂದಿವೆ. ಈ ಪೈಕಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 14,887 ಅಪಹರಣ ಪ್ರಕರಣ ದಾಖಲಾದರೆ, ಬಿಹಾರದಲ್ಲಿ 10,190, ಮಹಾರಾಷ್ಟ್ರದಲ್ಲಿ 9,297, ಮಧ್ಯಪ್ರದೇಶದಲ್ಲಿ 7,960 ಮತ್ತು ಪಶ್ಚಿಮ ಬಂಗಾಳದಲ್ಲಿ 6,596 ಪ್ರಕರಣಗಳು ವರದಿಯಾಗಿವೆ.
ಕೇಂದ್ರಾಡಳಿತ ಪ್ರದೇಶಗಳ ಪೈಕಿ ಅತಿ ಹೆಚ್ಚು(14,887) ಅಪಹರಣ ಪ್ರಕರಣಗಳು ದಾಖಲಾಗಿರುವುದು ದೆಹಲಿಯಲ್ಲಿ. ಕೇವಲ ನಾಲ್ಕು ಪ್ರಕರಣಗಳು ನಾಗಾಲ್ಯಾಂಡ್ನಲ್ಲಿ ದಾಖಲಾಗಿವೆ.
2022ರಲ್ಲಿ 31,982 ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ರಾಜಸ್ಥಾನದಲ್ಲಿ ಅತಿ ಹೆಚ್ಚು ಅಂದರೆ 5,399 ಪ್ರಕರಣಗಳು ದಾಖಲಾದರೆ, ಉತ್ತರ ಪ್ರದೇಶದಲ್ಲಿ 3,690, ಮಧ್ಯಪ್ರದೇಶದಲ್ಲಿ 3,029, ಮಹಾರಾಷ್ಟ್ರದಲ್ಲಿ 2,904 ಮತ್ತು ಹರಿಯಾಣದಲ್ಲಿ 1,787 ಪ್ರಕರಣಗಳು ದಾಖಲಾಗಿವೆ.
ಕೇಂದ್ರಾಡಳಿತ ಪ್ರದೇಶಗಳ ಪೈಕಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1,212 ಅತ್ಯಾಚಾರ ಪ್ರಕರಣಗಳು ದಾಖಲಾದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ 287 ಮತ್ತು ಚಂಢೀಗಢದಲ್ಲಿ 78 ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ 85,300 ಮಹಿಳೆಯರ ಮೇಲೆ ಹಲ್ಲೆ ನಡೆಸಲಾಗಿದೆ. ಮಹಾರಾಷ್ಟ್ರದಲ್ಲಿ 11,512 ಪ್ರಕರಣ, ಉತ್ತರ ಪ್ರದೇಶದಲ್ಲಿ 10,548, ರಾಜಸ್ಥಾನದಲ್ಲಿ 8,508, ಒಡಿಶಾ 7,327 ಮತ್ತು ಆಂಧ್ರಪ್ರದೇಶದಲ್ಲಿ 5,884 ಪ್ರಕರಣ ದಾಖಲಾಗಿವೆ. (ಐಎಎನ್ಎಸ್)
ಇದನ್ನೂ ಓದಿ: ದೆಹಲಿಯಲ್ಲಿ ಹೆಚ್ಚಾದ ಮಹಿಳೆಯರ ಮೇಲಿನ ಅಪರಾಧ, ಉತ್ತರ ಪ್ರದೇಶದಲ್ಲಿ ಪೋಕ್ಸೋ ಪ್ರಕರಣ ಏರಿಕೆ: ಎನ್‌ಸಿಆರ್‌ಬಿ