ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿರುವ ಲಿವಿ ಇನ್ ರಿಲೇಷನ್ಶಿಪ್ನಲ್ಲಿದ್ದ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣವು ದಿನದಿಂದ ದಿನಕ್ಕೆ ಹೊಸ ಆಯಾಮ ಪಡೆಯುತ್ತಿದೆ. ಪೊಲೀಸರು ತನಿಖೆಗೆ ಚುರುಕುಗೊಂಡಿರುವ ಬೆನ್ನಲ್ಲೇ ಹೊಸ ಮಾಹಿತಿ ಸಹ ಲಭ್ಯವಾಗುತ್ತಿದೆ. ಹರಿಯಾಣದ ಗುರುಗ್ರಾಮ್, ಮಹಾರಾಷ್ಟ್ರದ ಮುಂಬೈಗೂ ಇದರ ತನಿಖೆ ಹಬ್ಬಿದೆ.
ಶ್ರದ್ಧಾ ವಾಲ್ಕರ್ರನ್ನು ಆಕೆಯ ಗೆಳೆಯ ಅಫ್ತಾಬ್ ಪೂನಾವಾಲಾ ಕೊಂದು 35 ತುಂಡಗಳಾಗಿ ಕತ್ತರಿಸಿದ್ದ ಎಂಬ ಆಘಾತಕಾರಿ ಪ್ರಕರಣ ಬಯಲಾದ ದಿನದಿಂದಲೂ ಪೊಲೀಸರು ವಿವಿಧ ಆಯಾಮಗಳಲ್ಲಿ ನಿರಂತರವಾಗಿ ತನಿಖೆ ನಡೆಸುತ್ತಿದ್ದಾರೆ. ಇದೀಗ ಪೊಲೀಸರ ವಿಚಾರಣೆಯಲ್ಲಿ ಆರೋಪಿ ಅಫ್ತಾಬ್ ಗಾಂಜಾ ಚಟ ಹೊಂದಿದ್ದ ಎಂದು ತಿಳಿದು ಬಂದಿದೆ.
ಶವದ ಪಕ್ಕ ಕುಳಿತು ಗಾಂಜಾ ಸೇದಿದ್ದ: ಮೇ 18ರಂದು ಶ್ರದ್ಧಾ ಕೊಲೆಯಾದ ರಾತ್ರಿಯಿಡೀ ಗಾಂಜಾ ಸೇದಿದ್ದ. ಅದೇ ಅಮಲಿನಲ್ಲಿ ಅಫ್ತಾಬ್ ಶ್ರದ್ಧಾಳನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ. ಇದಾದ ನಂತರವೂ ಆರೋಪಿ ಶ್ರದ್ಧಾ ಮೃತದೇಹದ ಪಕ್ಕದಲ್ಲೇ ಕುಳಿತು ರಾತ್ರಿಯಿಡೀ ಗಾಂಜಾ ಸೇದುತ್ತಿದ್ದ. ಇದಾದ ಬಳಿಕ ಬೆಳಗ್ಗೆ ರೆಫ್ರಿಜರೇಟರ್ ಮತ್ತು ಗರಗಸ ತಂದು ಮೃತದೇಹವನ್ನು ತುಂಡರಿಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ ಎಂದು ಅಂಶ ಬೆಳಕಿಗೆ ಬಂದಿದೆ.
ಸ್ನೇಹಿತರ ಚಾಟಿಂಗ್ ಪರಿಶೀಲನೆ: ಹಂತಕ ಅಫ್ತಾಬ್ ಮತ್ತು ಕೊಲೆಯಾದ ಶ್ರದ್ಧಾ ಮತ್ತು ಅವರ ಸ್ನೇಹಿತರ ಚಾಟಿಂಗ್ಗಳನ್ನೂ ಪರಿಶೀಲಿಸಲು ದೆಹಲಿ ಪೊಲೀಸರು ಮುಂದಾಗಿದೆ. ಶ್ರದ್ಧಾ ಕೊಲೆಯಾದ ಮತ್ತು ನಂತರ ದಿನಗಳಲ್ಲಿ ನಡೆದ ಚಾಟಿಂಗ್ಗಳ ಮಾಹಿತಿ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಮೆಸೇಜಿಂಗ್ ಆ್ಯಪ್‌ಗಳಿಂದ ಚಾಟಿಂಗ್ ವಿವರಗಳ ಬಗ್ಗೆ ಪೊಲೀಸರು ಮಾಹಿತಿ ಕೇಳಿದ್ದಾರೆ.
ಅಲ್ಲದೇ, ಶ್ರದ್ಧಾ ಮತ್ತು ಅಫ್ತಾಬ್ ಫೋನ್‌ಗಳ ಹಿಂದಿನ ಲೊಕೇಶನ್ ಪತ್ತೆ ಹಚ್ಚಲು ಟೆಲಿಕಾಂ ಆಪರೇಟರ್‌ಗಳಿಗೂ ಪೊಲೀಸರು ಪತ್ರ ಬರೆಯಲು ನಿರ್ಧರಿಸಿದ್ದಾರೆ. ಶ್ರದ್ಧಾ ಹತ್ಯೆಯ ಮುನ್ನ ಮತ್ತು ನಂತರದ ಸಮಯದವರೆಗೆ ಗೂಗಲ್‌ನಲ್ಲಿ ಹಂತಕ ಅಫ್ತಾಬ್ ಏನು ಹುಡುಕುತ್ತಿದ್ದನೆಂದು ತಿಳಿಯಲು ಗೂಗಲ್ ಅಧಿಕಾರಿಗಳಿಗೂ ಪತ್ರ ಬರೆಯಲು ತೀರ್ಮಾನಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗುರುಗ್ರಾಮ್‌ನಲ್ಲಿ ಬ್ಯಾಗ್ ಪತ್ತೆ: ಇದರ ನಡುವೆ ಶುಕ್ರವಾರ ಬೆಳಗ್ಗೆ ಹರಿಯಾಣದ ಗುರುಗ್ರಾಮ್‌ನಲ್ಲಿರುವ ಅಫ್ತಾಬ್ ಕೆಲಸ ಮಾಡುತ್ತಿದ್ದ ಕಚೇರಿಗೆ ಪೊಲೀಸ್ ತಂಡ ತಲುಪಿದೆ. ಕಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ತನಿಖೆ ನಡೆಸಿ, ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಶೋಧಿಸಿದ್ದಾರೆ. ಇತ್ತ, ಕೀಚಕ ಅಫ್ತಾಬ್‌ನ ಹೇಳಿಕೆ ಮೇರೆಗೆ ಪೊಲೀಸರು ಡಿಎಲ್‌ಎಫ್ 3ನೇ ಹಂತದಲ್ಲಿರುವ ಅರಣ್ಯದಲ್ಲೂ ತನಿಖೆ ನಡೆಸಿದ್ದಾರೆ. ಇಲ್ಲಿ ಪೊಲೀಸರಿಗೆ ಕಪ್ಪು ಬ್ಯಾಗ್ವೊಂದು ಸಹ ಸಿಕ್ಕಿದೆ.
ಇದನ್ನೂ ಓದಿ: ಶ್ರದ್ಧಾ ತಲೆಗಾಗಿ ಪೊಲೀಸರ ಶೋಧ: ಆಘಾತಕಾರಿ ಸಂಗತಿ ಬಾಯ್ಬಿಟ್ಟ ದುರುಳ ಅಫ್ತಾಬ್!
ಮಾಹಿತಿ ಪ್ರಕಾರ, ಆರೋಪಿ ಅಫ್ತಾಬ್ ಗುರುಗ್ರಾಮ್ನಲ್ಲೇ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ. ಅದಕ್ಕಾಗಿಯೇ ಇಬ್ಬರೂ ಗುರುಗ್ರಾಮ್ಗೆ ಬಂದು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಈಗ ಪತ್ತೆಯಾದ ಬ್ಯಾಗ್‌ನಲ್ಲಿ ಶ್ರದ್ಧಾ ತುಂಡುಗಳನ್ನು ಹೂತಿಟ್ಟಿದ್ದ ಎಂದು ಊಹಿಸಲಾಗಿದೆ. ಸದ್ಯ ಪೊಲೀಸರ ತಂಡ ಗುರುಗ್ರಾಮ್ನಿಂದ ಬ್ಯಾಗ್ ಸಮೇತ ದೆಹಲಿಗೆ ತೆರಳಿದೆ.
ಗಮನಾರ್ಹವೆಂದರೆ ಇದುವರೆಗೂ ಪೊಲೀಸರಿಗೆ ಶ್ರದ್ಧಾಳ ಮೊಬೈಲ್, ಆಕೆಯ ತಲೆ, ಕೊಲೆಗೆ ಬಳಸಿದ ಆಯುಧ ಪತ್ತೆಯಾಗಿಲ್ಲ. ದೆಹಲಿ ಪೊಲೀಸರು ಪದೇ ಪದೆ ಕಾಡಿನಲ್ಲಿ ನಡೆದ ಕೊಲೆಯ ಸಾಕ್ಷ್ಯಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಇದೀಗ ಪೊಲೀಸರು ವಶಪಡಿಸಿಕೊಂಡಿರುವ ಬ್ಯಾಗ್‌ನಲ್ಲಿ ಶ್ರದ್ಧಾ ಇತರ ತುಂಡುಗಳಿವೆಯೇ ಅಥವಾ ಆರೋಪಿ ಅಫ್ತಾಬ್ ಬಳಸಿದ ಆಯುಧ ಪತ್ತೆಯಾಗಿದೆಯೇ ಎಂಬುದು ತನಿಖೆಯ ನಂತರವಷ್ಟೇ ತಿಳಿಯಲಿದೆ.
ಮುಂಬೈ ಆಸ್ಪತ್ರೆಗೆ ಬಂದಿದ್ದ ಶ್ರದ್ಧಾ: ಇದೆಲ್ಲದವರ ಮಧ್ಯೆ ಶ್ರದ್ಧಾ 2020ರಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಮಾಹಿತಿ ಸಹ ಹೊರ ಬಿದ್ದಿದೆ. ಗಾಯದ ಕಾರಣಗಳಿಂದಾಗಿ 2020ರ ಡಿಸೆಂಬರ್ 3ರಿಂದ ಡಿಸೆಂಬರ್ 6ರವರೆಗೆ ಮುಂಬೈನ ಓಝೋನ್ ಮಲ್ಟಿಸ್ಪೆಷಾಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎಂದು ಹೇಳಲಾಗಿದೆ.
ಆಗ ಶ್ರದ್ಧಾರಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಎಸ್‌ಪಿ ಶಿಂಧೆ ಮಾತನಾಡಿ, ಆಕೆ ತೀವ್ರ ಬೆನ್ನುನೋವು ಮತ್ತು ಕತ್ತು ನೋವಿನಿಂದ ಬಳಲುತ್ತಿದ್ದಳು. ಸ್ಪಾಂಡಿಲೋಸಿಸ್ ಇತ್ತು. ಆದರೆ, ಯಾವುದೇ ಬಾಹ್ಯ ಗಾಯಗಳು ಇರಲಿಲ್ಲ. ಒಳಪೆಟ್ಟುಗಳು ಮಾತ್ರ ಪತ್ತೆಯಾಗಿದ್ದವು. ಚಿಕಿತ್ಸೆಗಾಗಿ ಮತ್ತೆ ಶ್ರದ್ಧಾ ಹಿಂತಿರುಗಲಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶ್ರದ್ಧಾಳನ್ನು ಕೊಂದು ಮುಖ ಸುಟ್ಟು ವಿರೂಪಗೊಳಿಸಿದ್ದ ಪಾತಕಿ ಅಫ್ತಾಬ್!