ಲೂಧಿಯಾನ (ಪಂಜಾಬ್): ಪಂಜಾಬಿನ ಪ್ರಮುಖ ಹಬ್ಬವಾದ ಲೋಹ್ರಿ ಅಂಗವಾಗಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಗುರುವಾರ ಮಧ್ಯಾಹ್ನ ಸಣ್ಣ ವಿರಾಮ ಪಡೆಯಲಿದೆ. ಯಾತ್ರೆಯಲ್ಲಿ ಭಾಗವಹಿಸುವವರು ಮತ್ತು ಮುಖಂಡರು ಪಂಜಾಬಿ ಹಬ್ಬವಾದ ಲೋಹ್ರಿ ಆಚರಣೆಗೆ ಅನುವು ಮಾಡಿಕೊಡಲು ಯಾತ್ರೆಗೆ ವಿರಾಮ ನೀಡಲಾಗುತ್ತಿದೆ. ಲೂಧಿಯಾನದ ಖನ್ನಾದಿಂದ ಯಾತ್ರೆ ಭಾರತ್ ಜೋಡೊ ಯಾತ್ರೆ ಪುನರಾರಂಭಗಿದೆ. ಯಾತ್ರೆಯು ದೋರಾಹಾ, ಸಾಹ್ನೆವಾಲ್ ಮತ್ತು ಧಂಡಾರಿ ಮೂಲಕ ನಗರದ ಸಮ್ರಾಲಾ ಚೌಕ್ ತಲುಪಲಿದೆ.
ಲೂಧಿಯಾನ ಸಂಸದ ರವನೀತ್ ಸಿಂಗ್ ಬಿಟ್ಟು ಕೂಡ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಲಿದ್ದಾರೆ. ಮಧ್ಯಾಹ್ನ ಸಮರಲಾ ಚೌಕ್‌ನಲ್ಲಿ ಯಾತ್ರೆ ಮುಕ್ತಾಯಗೊಂಡಿದ್ದು, ಇಂದು ಸಂಜೆ ಪಾದಯಾತ್ರೆ ಇರುವುದಿಲ್ಲ. ಲೋಹ್ರಿ ಉತ್ಸವದ ಕಾರಣದಿಂದ ಯಾತ್ರೆಯಲ್ಲಿ ಭಾಗವಹಿಸಿದ್ದವರು ಜನವರಿ 13 ರಂದು ವಿರಾಮ ತೆಗೆದುಕೊಳ್ಳಲಿದ್ದಾರೆ ಮತ್ತು ಜನವರಿ 14 ರಂದು ಯಾತ್ರೆ ಪುನರಾರಂಭಿಸುತ್ತಾರೆ. ಯಾತ್ರೆಯು ಬುಧವಾರ ಪಂಜಾಬ್‌ಗೆ ಪ್ರವೇಶಿಸಿದೆ. ಯಾತ್ರೆಯಲ್ಲಿ ಭಾಗವಹಿಸಿರುವವರು ಫತೇಘರ್ ಸಾಹಿಬ್‌ನಲ್ಲಿರುವ ಗುರುದ್ವಾರದಲ್ಲಿ ನಮನ ಸಲ್ಲಿಸಿದರು. ಭಾರತ್ ಜೋಡೊ ಯಾತ್ರೆಯ ಪಂಜಾಬ್ ಘಟ್ಟ ಆರಂಭದ ಸಂಕೇತವಾಗಿ ಹರಿಯಾಣದ ಕಾಂಗ್ರೆಸ್ ನಾಯಕರು ಸಿರ್ಹಿಂದ್‌ನಲ್ಲಿ ಪಂಜಾಬ್‌ನ ಕಾಂಗ್ರೆಸ್ ನಾಯಕರಿಗೆ ಭಾರತದ ರಾಷ್ಟ್ರ ಧ್ವಜವನ್ನು ಹಸ್ತಾಂತರಿಸಿದರು.
ನಮ್ಮ ಯಾತ್ರೆ ಏಕತೆ ಸಂದೇಶ ಸಾರುತ್ತಿದೆ: ಬುಧವಾರ ಸಿರ್ಹಿಂದ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಮತ್ತು ಆರ್‌ಎಸ್‌ಎಸ್ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ಪರಸ್ಪರ ಎತ್ತಿಕಟ್ಟುತ್ತಿವೆ. ನಾವು ಜನರ ನಡುವೆ ಶಾಂತಿ ಮತ್ತು ಪ್ರೀತಿಗಾಗಿ ಪ್ರಯಾಣ ಪ್ರಾರಂಭಿಸಿದ್ದೇವೆ. ಈ ಯಾತ್ರೆ ಏಕತೆಯ ಸಂದೇಶ ಸಾರುತ್ತದೆ ಎಂದರು.
ಏತನ್ಮಧ್ಯೆ, ಮೂಲಭೂತವಾದಿ ಸಿಖ್ ಸಂಘಟನೆಯಾದ 'ಸಿಖ್ಸ್ ಫಾರ್ ಜಸ್ಟೀಸ್' (ಎಸ್‌ಎಫ್‌ಜೆ) ನಾಯಕ ಗುರುಪತ್‌ವಂತ್ ಸಿಂಗ್ ಪನ್ನು ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡದಂತೆ ಬೆದರಿಕೆ ಹಾಕಿದ ಆಡಿಯೋವನ್ನು ಬಿಡುಗಡೆ ಮಾಡಿದರು. 1984 ರ ಸಿಖ್-ವಿರೋಧಿ ದಂಗೆಗಳಲ್ಲಿ ಸಾವಿರಾರು ಜನ ಕೊಲ್ಲಲ್ಪಟ್ಟಿರುವುದನ್ನು ಆಡಿಯೋದಲ್ಲಿ ಪನ್ನು ನೆನಪಿಸಿದ್ದಾರೆ.
ಆಡಿಯೋದಲ್ಲಿ ವಿವಾದಾತ್ಮಕ ಹೇಳಿಕೆ: ’’ದರ್ಬಾರ್ ಸಾಹಿಬ್ ಮೇಲೆ ಯಾರೇ ದಾಳಿ ಮಾಡಿದರೂ ಅವರ ಜನಾಂಗವೇ ನಾಶವಾಗಿದೆ. ರಾಹುಲ್ ಗಾಂಧಿ ಮಾತ್ರ ಜೀವಂತವಾಗಿದ್ದಾರೆ’’ ಎಂದು ಪನ್ನು ಆಡಿಯೋದಲ್ಲಿ ಹೇಳಿದ್ದರು. ’’ರಾಹುಲ್ ಗಾಂಧಿಯನ್ನು ವಿರೋಧಿಸಲು ಎಸ್‌ಎಫ್‌ಜೆ ಕಾಶ್ಮೀರಿ ಹೋರಾಟಗಾರರ ಸಹಾಯ ಪಡೆಯಲಿದೆ’’ ಎಂದು ಪನ್ನು ತಿಳಿಸಿದ್ದಾರೆ. ರಾಹುಲ್ ಗಾಂಧಿ ಅಮೃತಸರದಿಂದ ಶ್ರೀನಗರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಆದರೆ, ಅವರಿಗೆ ಲಾಲ್ ಚೌಕದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಬಿಡುವುದಿಲ್ಲ ಎಂದು ಅವರು ಆಡಿಯೋದಲ್ಲಿ ಎಚ್ಚರಿಕೆ ನೀಡಿದ್ದರು.
ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆಯು ಪ್ರಸ್ತುತ ಪಂಜಾಬ್‌ನಲ್ಲಿ ಸಂಚರಿಸುತ್ತಿದೆ. 10 ರಾಜ್ಯಗಳು ಮತ್ತು ದೆಹಲಿ ಕೇಂದ್ರಾಡಳಿತ ಪ್ರದೇಶವನ್ನು ಹಾದು ಬಂದಿರುವ ಯಾತ್ರೆ ಈಗಾಗಲೇ 3,570 ಕಿ.ಮೀ. ದೂರ ಕ್ರಮಿಸಿದೆ. ಜನವರಿ 30 ರಂದು ಶ್ರೀನಗರದಲ್ಲಿ ರಾಹುಲ್ ಗಾಂಧಿ ತ್ರಿವರ್ಣ ಧ್ವಜಾರೋಹಣ ಮಾಡುವ ಮೂಲಕ ಯಾತ್ರೆ ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಭಾರತ್ ಜೋಡೋ ನಡಿಗೆ: ಮಕ್ಕಳೊಂದಿಗೆ ಸಂವಾದ ಮಾಡಿದ ರಾಹುಲ್ ಗಾಂಧಿ