ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ಕೇಸ್ಗಳ ಜೊತೆ ಒಮಿಕ್ರಾನ್ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಅರವಿಂದ್ ಕೇಜ್ರಿವಾಲ್ ಸರ್ಕಾರ ಲಾಕ್ಡೌನ್ ತರಹದ ನಿರ್ಬಂಧ ಹೇರಿದೆ.
ಈ ನಿರ್ಬಂಧಗಳಲ್ಲಿ ಒಂದೇನೆಂದರೆ, ನಗರದಲ್ಲಿನ ಅಂಗಡಿಗಳು ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು 'ಸಮ-ಬೆಸ' (ಉದಾಹರಣೆಗೆ 2,4,6,8 ಹಾಗು 1,3,5,7) ನಿಯಮದ ಆಧಾರದ ಮೇಲೆ ಮಾತ್ರ ತೆರೆಯಬೇಕು. ಅಂದರೆ, ಒಂದು ದಿನ ನಿಮ್ಮ ಅಂಗಡಿ ತೆರೆದರೆ ಆ ದಿನ ನಿಮ್ಮ ಪಕ್ಕದ ಶಾಪ್ ಓಪನ್ ಮಾಡುವಂತಿಲ್ಲ. ಜನಸಂದಣಿ ನಿಯಂತ್ರಿಸಲು ಈ ನಿಯಮವನ್ನು ಹೇರಲಾಗಿದೆ.
ಆದರೆ, ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ಪ್ರೇಮ್ ಸಿಂಗ್ ಎಂಬವರು ತಮ್ಮ ಸರತಿಯಲ್ಲದ ದಿನದಂದು (ಸಮ ದಿನದಂದು) ಅಂಗಡಿ ಓಪನ್ ಮಾಡಿ ವ್ಯಾಪಾರ ನಡೆಸಿದ್ದಾರೆ. ಡಿಢೀರನೆ ಇತರ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅಂಗಡಿ ಮಾಲೀಕನನ್ನು ತರಾಟೆಗೆ ತೆಗೆದುಕೊಂಡು 50,000 ರೂ. ದಂಡ ವಿಧಿಸಿದ್ದಾರೆ.
ಇದನ್ನೂ ಓದಿ: Delhi Night Curfew: ಕೊರೊನಾ ಹೆಚ್ಚಳ, ರಾಷ್ಟ್ರ ರಾಜಧಾನಿಯಲ್ಲೂ ನೈಟ್ ಕರ್ಫ್ಯೂ ಜಾರಿ
ಇನ್ನು ನಿಯಮ ಉಲ್ಲಂಘಿಸಿ ಸೀಲಂಪುರ್ ಪ್ರದೇಶದಲ್ಲಿ ತೆರೆದಿದ್ದ ವಾರದ ಮಾರುಕಟ್ಟೆಗಳನ್ನು ಮುಂದಿನ ಆದೇಶದವರೆಗೆ ಅಧಿಕಾರಿಗಳು ಮುಚ್ಚಿಸಿದ್ದು, ಅಗತ್ಯ ವಸ್ತುಗಳ ವ್ಯಾಪಾರದ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಿದರು.
ದೆಹಲಿಯಲ್ಲಿ ಕೋವಿಡ್, ಮುನ್ನೆಚ್ಚರಿಕೆ ಕ್ರಮಗಳು:
ದೆಹಲಿಯಲ್ಲಿ ನಿನ್ನೆ ಒಂದೇ ದಿನ 1,313 ಕೋವಿಡ್ ಕೇಸ್ಗಳು ಪತ್ತೆಯಾಗಿದ್ದು, ಈ ಪೈಕಿ 25 ಒಮಿಕ್ರಾನ್ ಪ್ರಕರಣಗಳಾಗಿವೆ. ರಾಷ್ಟ್ರ ರಾಜಧಾನಿಯಲ್ಲಿ ಈವರೆಗೆ 263 ಒಮಿಕ್ರಾನ್ ಸೋಂಕಿತರು ಪತ್ತೆಯಾಗಿದ್ದಾರೆ. ಎರಡನೇ ಅಲೆಯಲ್ಲಿ ಉಲ್ಬಣಗೊಂಡ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಂಡಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಈ ಬಾರಿ ಕೂಡ ಸಂಭಾವ್ಯ 3ನೇ ಅಲೆ ತಡೆಯಲು ಒಂದೊಂದೇ ನಿರ್ಬಂಧಗಳನ್ನು ಜಾರಿಗೊಳಿಸುತ್ತಿದ್ದಾರೆ. ಈಗಾಗಲೇ ನೈಟ್ ಕರ್ಫ್ಯೂ ಕೂಡ ಜಾರಿಯಲ್ಲಿದೆ.