ಮುಂಬೈ( ಮಹಾರಾಷ್ಟ್ರ): ಬಿಜೆಪಿ ಹಿಂದುತ್ವವನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದಿದೆ ಎಂದಿರುವ ಉದ್ದವ್ ಠಾಕ್ರೆ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿರುವ ಸಂಜಯ್ ರಾವತ್, ಮಹಾರಾಷ್ಟ್ರದಲ್ಲಿ ಬಿಜೆಪಿ ಬೆಳೆಯಲು ಶಿವಸೇನೆ ಕಾರಣ, ಕೆಳಹಂತದಲ್ಲಿದ್ದ ಪಕ್ಷವನ್ನು ಮೇಲೆಕ್ಕೆ ಎತ್ತಿದ್ದೇ ಶಿವಸೇನೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ರಾವತ್, ಬಾಬರಿ ಮಸೀದಿ ಉರುಳಿದ ಬಳಿಕ ಉತ್ತರಭಾರತದಲ್ಲಿ ಶಿವಸೇನಾ ಅಲೆ ಎದ್ದಿತ್ತು. ಒಂದೊಮ್ಮೆ ನಾವು ಆ ಸಮಯದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಪಕ್ಷದವತಿಯಿಂದ ಪ್ರಧಾನಿ ಮಂತ್ರಿ ಮಾಡಬಹುದಿತ್ತು. ಆದರೆ, ನಾವು ಅವುಗಳನ್ನೆಲ್ಲ ಬಿಟ್ಟೆವು. ಆದರೆ, ಹಿಂದುತ್ವದ ಅಲೆಯನ್ನು ಬಿಜೆಪಿ ಬಳಸಿಕೊಂಡಿತು ಎಂದು ಕೇಸರಿ ಪಕ್ಷದ ವಿರುದ್ಧ ಹರಿಹಾಯ್ದರು.
ಹಂತ ಹಂತವಾಗಿ ನಾಶ: ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಪಕ್ಷಗಳು ಹಂತ ಹಂತವಾಗಿ ನಾಶವಾಗುತ್ತಿರುವುದು ಸತ್ಯ, ಧರ್ಮದ ಬಗ್ಗೆ ಅಭಿಮಾನ ಪಡುವುದು ಒಳ್ಳೆಯದೇ ಆಗಿದೆ. ಆದರೆ, ಅನ್ಯ ಧರ್ಮದ ಬಗ್ಗೆ ದ್ವೇಷ ಸಾಧಿಸುವುದು ಸರಿಯಲ್ಲ ಎಂದಿದ್ದಾರೆ ರಾವತ್.
ನಾವು ಅವರಿಗೆ (ಬಿಜೆಪಿ) ಬೆಂಬಲ ನೀಡಿದ್ದೆವು ನಾವು 25 ವರ್ಷಗಳಿಂದ ಮೈತ್ರಿ ಮಾಡಿಕೊಂಡಿದ್ದೆವು. ಬಿಜೆಪಿ ಅಧಿಕಾರಕ್ಕಾಗಿ ಹಿಂದುತ್ವವನ್ನು ಬಳಸಿಕೊಂಡಿತು. ನಾವು ಈಗ ಬಿಜೆಪಿಯನ್ನು ಬಿಟ್ಟಿದ್ದೇವೆ. ಆದರೆ, ಹಿಂದುತ್ವವನ್ನು ಬಿಡುವುದಿಲ್ಲ ಎಂದು ಘೋಷಿಸಿದರು.