ಪಂಜಾಬ್: ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಶಿರೋಮಣಿ ಅಕಾಲಿ ದಳ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ, ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರನ್ನು ಪಂಜಾಬ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ನಿವಾಸದ ಮುಂದೆ ಶಿರೋಮಣಿ ಅಕಾಲಿ ದಳದ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪಂಜಾಬ್‌ನ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಸಿಧುವನ್ನು ಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಚಂಡೀಗಢದಲ್ಲಿ ಎಸ್‌ಎಡಿ ಪ್ರತಿಭಟನೆ ನಡೆಸುತ್ತಿದೆ. ಕೋವಿಡ್ ರೋಗಿಗಳಿಗೆ ನೀಡುವ ವೈದ್ಯಕೀಯ ಕಿಟ್ ಸಂಗ್ರಹ ಮತ್ತು ಲಸಿಕೆ ಮಾರಾಟದಲ್ಲಿ ಅವ್ಯವಹಾರ ನಡೆದಿರುವುದಾಗಿ ಎಸ್‌ಎಡಿ ಮುಖ್ಯಸ್ಥ ಸುಖ್ಬೀರ್ ಸಿಂಗ್ ಆರೋಪಿಸಿದ್ದು, ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.
ಪೊಲೀಸರು ವಶಕ್ಕೆ ಪಡೆಯುವ ಮುನ್ನ ಮಾತನಾಡಿರುವ ಬಾದಲ್, ಪ್ರತಿಭಟನೆ ತೀವ್ರವಾಗಿದೆ, ಅದನ್ನು ತಡೆಯಲು ಸಿಎಂಗೆ ಸಾಧ್ಯವಾಗಲ್ಲ ಎಂದಿದ್ದಾರೆ.
ಪ್ರತಿಭಟನೆ ತೀವ್ರವಾದರೆ ಕ್ಯಾಪ್ಟನ್ ತನ್ನೆಲ್ಲಾ ಶಕ್ತಿ ಬಳಸಿದರೂ ತಡೆಯಲು ಸಾಧ್ಯವಾಗಲ್ಲ. ವ್ಯಾಕ್ಸಿನೇಷನ್‌ನಲ್ಲಿ ಹಗರಣವಿದೆ, ಫತೇ ಕಿಟ್‌ನಲ್ಲಿ ಹಗರಣವಿದೆ, ಎಸ್‌ಸಿ ವಿದ್ಯಾರ್ಥಿ ವೇತನದಲ್ಲಿ ಹಗರಣವಿದೆ, ರೈತರ ಭೂಮಿಯನ್ನು ಸಹ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ ಎಂದು ಬಾದಲ್ ಆರೋಪಿಸಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಭದ್ರತಾ ಪಡೆಗಳು ಪ್ರತಿಭಟನಾ ನಿರತ ಅಕಾಲಿ ದಳದ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಜಲ ಫಿರಂಗಿಗಳನ್ನು ಪ್ರಯೋಗಿಸಿದರು.
ವ್ಯಾಕ್ಸಿನೇಷನ್ ಮತ್ತು ಕೊವಿಡ್ -19 ನಿರ್ವಹಣೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ವಿರೋಧ ಪಕ್ಷವು ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದೆ. ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹೊತ್ತಲ್ಲಿ ಈ ಪ್ರತಿಭಟನೆ ನಡೆದಿದೆ.
ಇದನ್ನೂ ಓದಿ:LJP ಬಿರುಕಿಗೆ ಸಿಎಂ ನಿತೀಶ್ ಕುಮಾರ್ ಕಾರಣ: ಆರ್ಜೆಡಿ ನಾಯಕ ಮನೋಜ್ ಝಾ ಆರೋಪ
ಇತ್ತೀಚೆಗಷ್ಟೇ, ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಪಂಜಾಬ್‌ನಲ್ಲಿ 2022 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮೈತ್ರಿ ಮಾಡಿಕೊಂಡವು. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಈ ಮೈತ್ರಿಯನ್ನು ಪಂಜಾಬ್‌ನಲ್ಲಿ ಪ್ರಗತಿ ಮತ್ತು ಸಮೃದ್ಧಿಗೆ ಕಾರಣವಾಗುವ ಹೊಸ ರಾಜಕೀಯ ಎಂದು ಕರೆದಿದ್ದಾರೆ. ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಇದನ್ನು ರಾಜ್ಯ ರಾಜಕೀಯದಲ್ಲಿ ಹೊಸ ದಿನ ಎಂದು ಬಣ್ಣಿಸಿದ್ದಾರೆ.