ಅಹ್ಮದ್ನಗರ/ಮಹಾರಾಷ್ಟ್ರ: ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್ (ಎಸ್‌ಎಸ್‌ಎಸ್‌ಟಿ)ಹೆಸರಲ್ಲಿ ಸಾಯಿಬಾಬಾ ಭಕ್ತರಿಂದ ಅಕ್ರಮ ದೇಣಿಗೆ ಕೋರಿ ಆನ್‌ಲೈನ್ ವಂಚನೆ ನಡೆಸುತ್ತಿರುವ ಜಾಲ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಲವು ಅಪರಿಚಿತ ವ್ಯಕ್ತಿಗಳು ದೇವಾಲಯದ ಪ್ರತಿನಿಧಿಗಳ ರೂಪದಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ದೇಣಿಗೆ ಕೇಳುತ್ತಿದ್ದಾರೆ. ಬ್ಯಾಂಕ್ ವಿವರಗಳನ್ನು ಕೇಳುತ್ತಿದ್ದಾರೆ ಎಂದು ಕಳೆದ ವಾರ ಎಸ್‌ಎಸ್‌ಎಸ್‌ಟಿ ಅಧಿಕಾರಿಗಳಿಗೆ ದೂರುಗಳು ಬಂದಿವೆ ಎಂದು ಟ್ರಸ್ಟ್‌ನ ಸಿಇಒ ಕನ್ಹುರಾಜ್ ಬಾಗಟೆ ತಿಳಿಸಿದ್ದಾರೆ.
ಪೂಜಾ, ಆರತಿ, ಪ್ರಸಾದ ಇತ್ಯಾದಿಗಳಿಗೆ ದೇಣಿಗೆ ನೀಡಿ ಎಂದು ಸಾರ್ವಜನಿಕರಿಗೆ ವಾಟ್ಸ್ಆ್ಯಪ್, ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಗುಂಪುಗಳಲ್ಲಿ ಕೆಲವು ಸಂದೇಶಗಳು ಬಂದಿವೆ.
ನಾವು ಈ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸಿದ್ದು ಅವರೆಲ್ಲ ವಂಚಕರು ಎಂದು ಕಂಡು ಬಂದಿದೆ ಅಂತ ಎಸ್‌ಎಸ್‌ಟಿ ವಕ್ತಾರ ಏಕ್ನಾಥ್ ಗೊಂಡ್ಕರ್ ತಿಳಿಸಿದ್ದಾರೆ.
ಈಗಾಗಲೇ ಕೊರೊನಾ ಲಾಕ್ಡೌನ್ ಹಿನ್ನೆಲೆ ಏಪ್ರಿಲ್ 5 ರಿಂದಲೇ ಶಿರಡಿ ಸಾಯಿಬಾಬಾ ದೇವಾಲಯವನ್ನು ಬಂದ್ ಮಾಡಲಾಗಿದೆ."ಆದರೂ, ಈ ಸಂದರ್ಭಗಳಲ್ಲಿ, ಅನಾಮಧೇಯ ಸಂಸ್ಥೆ ಶಿರಡಿ ಹೆಸರಲ್ಲಿ ಅನ್ನದಾನಕ್ಕೆ ಪೇಟಿಎಂ ಮತ್ತು ಗೂಗಲ್ ಪೇ ಮೂಲಕ ದೇಣಿಗೆ ಪಾವತಿಗೆ ಭಕ್ತರಿಗೆ ಒತ್ತಾಯಿಸುತ್ತಿದೆ ಎಂದು ತಿಳಿದು ಬಂದಿದೆ ಎಂದು ಅವರು ಹೇಳಿದ್ರು.
ನಮ್ಮ ಟ್ರಸ್ಟ್ ಶ್ರೀ ಸಾಯಿಬಾಬಾ ಹೆಸರಿನಲ್ಲಿ ಈ ರೀತಿಯ ಯಾವುದೇ ಆನ್‌ಲೈನ್ ದೇಣಿಗೆಗೆ ಬೇಡಿಕೆ ಇಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನೆಲೆ ಶ್ರೀ ಸಾಯಿಬಾಬಾ ಟ್ರಸ್ಟ್ ಆನ್‌ಲೈನ್ ವಂಚನೆಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಸಿದೆ. ದೇಣಿಗೆ ಹೆಸರಲ್ಲಿ ಬರುವ ಯಾವುದೇ ಕರೆಗಳಿಗೆ ಸ್ಪಂದಿಸುವ ಮೊದಲು ಟ್ರಸ್ಟ್ ಅಧಿಕಾರಿಗಳನ್ನು ತಮ್ಮ ಅಧಿಕೃತ ವೆಬ್‌ಸೈಟ್‌ಗಳು ಅಥವಾ ಇಮೇಲ್ ಮೂಲಕ ಸಂಪರ್ಕಿಸುವಂತೆ ಸಲಹೆ ನೀಡಿದೆ.