ಕೋಲ್ಕತ್ತಾ : ದೇಶದ ಅತೀ ಹಳೆಯ ದೊಡ್ಡ ಪಕ್ಷ ಕಾಂಗ್ರೆಸ್ ಕುರಿತು ಪ್ರತಿಪಕ್ಷಗಳು ವಿವಿಧ ರೀತಿಯಲ್ಲಿ ಮಾತನಾಡುತ್ತಿವೆ. ಮುಂದಿನ ದಿನಗಳಲ್ಲಿ ಅವುಗಳ ಧ್ವನಿ ಬಿಜೆಪಿ ಸೋಲಿಸಲು ಒಂದಾಗುತ್ತದೆ ಎಂದು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಹೇಳಿದರು.
ನಗರದಲ್ಲಿ ಶನಿವಾರ ತಮ್ಮ 'Pride, Prejudice & Punditry' ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಕಳೆದ ಏಳು ವರ್ಷದಿಂದ ಉತ್ತಮ ಆಡಳಿತದ ಮೂಲತತ್ವ ಮರೆಯಾಗಿದೆ. ಚಿಹ್ನೆ ಮತ್ತು ಘೋಷಣೆ ಮಾಡಿದ್ದೇ ಬಿಜೆಪಿಯ ಉತ್ತಮ ಆಡಳಿತ ಎಂದು ಅವರು ಜರಿದರು.
Shashi Tharoor slams BJP governance: ರಾಜಕೀಯದಲ್ಲಿ ಒಂದು ವಾರ ಅಂದ್ರೆ ಅದೇ ದೊಡ್ಡದು, ಹೇಗೋ ಲೋಕಸಭೆ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಬಾಕಿ ಇದೆ. ನಮಗೆ ಭರವಸೆ ಇದೆ, ಎಲ್ಲರೂ ಬಿಜೆಪಿ ಸೋಲಿಗಾಗಿ ಒಂದಾಗುತ್ತಾರೆ. ಇದು ಬರೀ ಬಿಜೆಪಿ ಸೋಲಿಸುವುದಲ್ಲ, ಅದರ ನೀತಿಗಳು ಮತ್ತು ರಾಜಕೀಯವನ್ನು ಸೋಲಿಸುವುದು ಎಂದು ಹೇಳಿದರು. ಕೆಲ ಪ್ರತಿಪಕ್ಷಗಳು ತಮ್ಮ ಸೋಲಿಗಾಗಿ ನಮ್ಮ ಮೇಲೆ ವಾಗ್ದಾಳಿ ನಡೆಸಿದವು. ಆದ್ರೆ ಅವುಗಳ ಉದ್ದೇಶ ಬಿಜೆಪಿ ಸೋಲಿಸುವುದಾಗಿದೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಮತ್ತು ಎನ್‌ಡಿಎ ಅಧಿಕಾರಾವಧಿಯ ಕಳೆದ 7 ವರ್ಷದಲ್ಲಿ ಉತ್ತಮ ಆಡಳಿತ ದೇಶದಲ್ಲಿ ಮರೆಯಾಗಿದೆ. ಬರೀ ಒಂದು ವಾರಕಾಲ ಉತ್ತಮ ಆಡಳಿತ ನೀಡುವುದಲ್ಲ, ವರ್ಷಗಳ ಕಾಲ ನೀಡಬೇಕು ಎಂದು ಕೇಂದ್ರ ಸರ್ಕಾರ 'ಉತ್ತಮ ಆಡಳಿತ ಸಪ್ತಾಹ' ಅಭಿಯಾನವನ್ನು ಅವರು ಟೀಕಿಸಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಕಳೆದ ಏಳು ವರ್ಷಗಳಿಂದ ದೇಶದಲ್ಲಿ ಉತ್ತಮ ಆಡಳಿತ ಮರೆಯಾಗಿದೆ ಎಂದು ಪ್ರತಿಪಾದಿಸಿದ ತರೂರ್, 'ಈ ಸರ್ಕಾರದೊಂದಿಗಿನ ನನ್ನ ದೊಡ್ಡ ಸಮಸ್ಯೆ ಅಂದ್ರೆ ವರ್ಷದ 52 ವಾರಗಳ ಕಾಲ ಉತ್ತಮ ಆಡಳಿತ ಇಲ್ಲದಿರುವುದು. ಆದ್ದರಿಂದ ಕೇವಲ ಒಂದು ವಾರದವರೆಗೆ ಉತ್ತಮ ಆಡಳಿತವನ್ನು ಹೊಂದಿರುವುದು ಸಾಕಾಗುವುದಿಲ್ಲ' ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಮತ್ತು ಸುಧಾರಿತ ಸೇವಾ ವಿತರಣೆಗಾಗಿ ಕೇಂದ್ರವು ಸೋಮವಾರ ರಾಷ್ಟ್ರವ್ಯಾಪಿ 'ಉತ್ತಮ ಆಡಳಿತ ಸಪ್ತಾಹ' ವಿಶೇಷವಾಗಿ ಅಭಿಯಾನವನ್ನು ಪ್ರಾರಂಭಿಸಲಿದೆ.