ಚೆನ್ನೈ (ತಮಿಳುನಾಡು): ತಮಿಳುನಾಡಿನ ಮದ್ರಾಸ್ ಐಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅಪರಿಚಿತ ವ್ಯಕ್ತಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಘಟನೆ ನಡೆದಿದೆ. ವಿದ್ಯಾರ್ಥಿನಿ ಧೈರ್ಯದಿಂದ ಪ್ರತಿರೋಧವೊಡ್ಡಿದಾಗ ಆರೋಪಿ ಸ್ಥಳದಿಂದ ಪರಾರಿಯಾಗಿದ್ಧಾನೆ.
ಜುಲೈ 24ರಂದು ರಾತ್ರಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ಸೈಕಲ್ನಲ್ಲಿ ಹಾಸ್ಟೆಲ್‌ಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಆಕೆಯನ್ನು ತಡೆದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ಧಾನೆ. ಸಹಾಯಕ್ಕಾಗಿ ವಿದ್ಯಾರ್ಥಿನಿ ಜೋರಾಗಿ ಕೂಗಿದ್ದಾರೆ. ಆದರೆ, ಯಾರೂ ಸ್ಪಂದಿಸಲಿಲ್ಲ. ನಂತರ ಹೇಗೋ ಆ ವ್ಯಕ್ತಿಯ ವಿರುದ್ಧ ಆಕೆಯೇ ದಿಟ್ಟತನದಿಂದ ಸೆಣಸಾಡಿದ್ದಾರೆ. ಇದರಿಂದ ಆರೋಪಿ ಸ್ಥಳದಿಂದ ಓಡಿ ಹೋಗಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿಯೊಂದಿಗೆ ಸೆಣಸಾಡುವಾಗ ವಿದ್ಯಾರ್ಥಿನಿ ಗಾಯಗೊಂಡಿದ್ದು, ಘಟನೆಯ ಬಗ್ಗೆ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದಾರೆ. ನಂತರ ಸ್ನೇಹಿತರ ಜೊತೆಗೂಡಿ ಮೈಲಾಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ವಿದ್ಯಾರ್ಥಿನಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಚೆನ್ನೈನ ಸಹಾಯಕ ಪೊಲೀಸ್ ಆಯುಕ್ತರು ಖುದ್ದು ಐಐಟಿ ಕ್ಯಾಂಪಸ್‌ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ಸಂಬಂಧ ಐಐಟಿ ಕ್ಯಾಂಪಸ್‌ನಲ್ಲಿ ಜ್ಯೂಸ್ ಅಂಗಡಿ ನಡೆಸುತ್ತಿರುವ ಬಿಹಾರ ಮೂಲದ 24 ವರ್ಷದ ಸಂತಕುಮಾರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಸಂಪೂರ್ಣ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಪೊಲೀಸರಿಗೆ ಚೆನ್ನೈ ಪೊಲೀಸ್ ಆಯುಕ್ತ ಶಂಕರ್ ಜಿವಾಲ್ ಆದೇಶಿಸಿದ್ದಾರೆ.
ಇದನ್ನೂ ಓದಿ: ಗಂಡನ ಅಕ್ರಮ ಸಂಬಂಧ, ವರದಕ್ಷಿಣೆ ಕಿರುಕುಳ: ಮಗುವಿನೊಂದಿಗೆ ತಾಯಿ ಆತ್ಮಹತ್ಯೆ