ಭುವನೇಶ್ವರ (ಒಡಿಶಾ): ಒಡಿಶಾ ರಾಜ್ಯ ರಾಜಧಾನಿ ಭುವನೇಶ್ವರದಲ್ಲಿ ಬುಧವಾರ ಲೈಂಗಿಕ ಸುಲಿಗೆ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಈ ದಂಧೆಯಲ್ಲಿ ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದರು ಎಂಬ ಆತಂಕಕಾರಿ ಮಾಹಿತಿ ಹೊರ ಬಿದ್ದಿದೆ. ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ, ನಾಲ್ವರು ಅಪ್ರಾಪ್ತರನ್ನು ಬಾಲಾಗೃಹಕ್ಕೆ ಕಳುಹಿಸಿದ್ದಾರೆ.
ಸಲಿಂಗಕಾಮಿ ಡೇಟಿಂಗ್ ಆ್ಯಪ್‌ಗಳ ಮೂಲಕ ಜನರೊಂದಿಗೆ ಆತ್ಮೀಯ ಚಾಟ್‌ಗಳಲ್ಲಿ ಆರೋಪಿಗಳು ತೊಡಗಿಸಿಕೊಳ್ಳುತ್ತಿದ್ದರು. ನಂತರ ಗ್ರಾಹಕರನ್ನು ನಿಗದಿತ ಸ್ಥಳದಲ್ಲಿ ಭೇಟಿಯಾಗಲು ಆಹ್ವಾನಿಸಿ, ಅಲ್ಲಿ ದೈಹಿಕ ಸಂಬಂಧ ಬೆಳೆಸುತ್ತಿದ್ದರು ಎಂದು ಭುವನೇಶ್ವರ ವಲಯ 2ರ ಉಪ ಪೊಲೀಸ್ ಆಯುಕ್ತ ಗಿರಿಜಾ ಚಕ್ರವರ್ತಿ ತಿಳಿಸಿದರು. ಬಂಧಿತ ಆರೋಪಿ ಮತ್ತು ನಾಲ್ವರು ಅಪ್ರಾಪ್ತರು ಒಟ್ಟಾಗಿ ಈ ಗ್ಯಾಂಗ್ ರಚಿಸಿಕೊಂಡಿದ್ದರು. ಓದುವ ವಯಸ್ಸಿನಲ್ಲಿ ಹಣ, ದುಬಾರಿ ಮೊಬೈಲ್ಗಳ ಆಸೆಗಾಗಿ ಈ ಆರೋಪಿಗಳು ಇಂತಹ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದರು ಎಂದು ಅವರು ಮಾಹಿತಿ ನೀಡಿದರು.
ಕಾಲೇಜು ನಂತರ ಈ ಅಪ್ರಾಪ್ತ ವಯಸ್ಕರು ಕೆಲವು ಫ್ರೆಂಡ್ಶಿಪ್ ಅಪ್ಲಿಕೇಶನ್‌ಗಳು ಮತ್ತು ಸಲಿಂಗಕಾಮಿ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಐಡಿಗಳನ್ನು ರಚಿಸಿಕೊಳ್ಳತ್ತಿದ್ದರು. ಈ ಮೂಲಕ ಅನೇಕ ಯುವಕರೊಂದಿಗೆ ಸ್ನೇಹ ಮಾಡುತ್ತಿದ್ದರು. ಇದೇ ಸ್ನೇಹದ ನೆಪದಲ್ಲಿ ಕೆಲವು ಯುವಕರನ್ನು ಆಕರ್ಷಿಸಿ, ನಿಗದಿತ ಸ್ಥಳಕ್ಕೆ ಅವರನ್ನು ಡೇಟಿಂಗ್‌ಗೆ ಕರೆಯುತ್ತಿದ್ದರು. ಈ ಮೂಲಕ ಸಲಿಂಗಕಾಮದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಈ ವೇಳೆ ವಿಡಿಯೋವನ್ನೂ ಚಿತ್ರೀಕರಿಸುತ್ತಿದ್ದರು. ನಂತರ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ಡಿಸಿಪಿ ವಿವರಿಸಿದರು.
ಈ ದಂಧೆಯ ಪ್ರಮುಖ ಆರೋಪಿಯನ್ನು ಗಂಜಾಂ ಜಿಲ್ಲೆಯ ಮನೋಜ್ ದೋರಾ ಎಂದು ಗುರುತಿಸಲಾಗಿದೆ. ಈತ ಭುವನೇಶ್ವರದ ಸಮಂತಪುರ ಲಕ್ಷ್ಮೀ ಮಂಟಪದ ಬಳಿ ವಾಸವಾಗಿದ್ದ. ಈ ಆರೋಪಿಗಳು ಇಬ್ಬರು ಸಂತ್ರಸ್ತರಿಂದ ಒಟ್ಟು 1.10 ಲಕ್ಷ ರೂ. ಲೂಟಿ ಮಾಡಿದ್ದಾರೆ. ಈ ಪೈಕಿ 34 ಸಾವಿರ ನಗದು, ಐಫೋನ್, ಬೈಕ್ ಸೇರಿದಂತೆ ಹಲವು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಲಿಂಗರಾಜ್ ಪೊಲೀಸ್ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ಈ ಗ್ಯಾಂಗ್ ಎಷ್ಟು ಜನರಿಂದ ಈ ರೀತಿ ಸುಲಿಗೆ ಮಾಡಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಸಂತ್ರಸ್ತರ ದೂರಿನ ಪ್ರಕಾರ, ಕೆಲ ದಿನಗಳ ಹಿಂದೆ ಆರೋಪಿಗಳು ಫೋನ್ ಪೇ ಮೂಲಕ ಹಣ ಪಡೆದಿದ್ದರು. ನಂತರ ಅಮಾನುಷವಾಗಿ ಥಳಿಸಿ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿಸಿಕೊಂಡಿದ್ದರು. ಈ ಕುರಿತು ಭುವನೇಶ್ವರ್ ಮತ್ತು ಖೋರ್ಧಾದಿಂದ ಇಬ್ಬರು ಸಂತ್ರಸ್ತರ ಲಿಖಿತ ದೂರಿನ ಆಧಾರದ ಮೇಲೆ ಈ ತನಿಖೆ ಆರಂಭಿಸಲಾಗಿತ್ತು ಎಂದು ಚಕ್ರವರ್ತಿ ತಿಳಿಸಿದರು.
ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಪ್ರಿಯತಮೆಯ ಖಾಸಗಿ ಫೋಟೊ ಪೋಸ್ಟ್; ಆರೋಪಿ ಬಂಧನ