ನವದೆಹಲಿ: ಗೋದ್ರೋತ್ತರ ಗಲಭೆ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯಾಧಾರಗಳ ಸೃಷ್ಟಿಸಿದ ಆರೋಪ ಎದುರಿಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ವಿರುದ್ಧ ಗುಜರಾತ್ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಒಂದು ವಾರ ಕಾಲ ತಡೆ ನೀಡಿದೆ. ಇಂದು ಬೆಳಗ್ಗೆ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ಗುಜರಾತ್ ಹೈಕೋರ್ಟ್ ತೀಸ್ತಾ ಸೆಟಲ್ವಾಡ್ ಅವರಿಗೆ ಕೂಡಲೇ ಶರಣಾಗುವಂತೆ ಸೂಚಿಸಿತ್ತು. ಹೀಗಾಗಿ ಮಧ್ಯಂತರ ರಕ್ಷಣೆ ಕೋರಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಈಗಾಗಲೇ ಜಾಮೀನನ ಮೇಲೆ ಹೊರಗಡೆ ಇರುವ ತೀಸ್ತಾ ಸೆಟಲ್ವಾಡ್ ಅವರ ಅರ್ಜಿಯನ್ನು ಇಂದು ಬೆಳಗ್ಗೆ ವಿಚಾರಣೆ ನಡೆಸಿದ್ದ ಗುಜರಾತ್ ಹೈಕೋರ್ಟ್ನ ನ್ಯಾಯಮೂರ್ತಿ ನಿರ್ಜರ್ ದೇಸಾಯಿ ಅವರ ಪೀಠ ಆ ಅರ್ಜಿಯನ್ನು ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ತೀಸ್ತಾ ಸೆಟಲ್ವಾಡ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವಿಶೇಷ ವಿಚಾರಣೆಯಲ್ಲಿ ಅರ್ಜಿ ಆಲಿಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಧ್ಯಂತರ ರಕ್ಷಣೆ ನೀಡುವ ಕುರಿತು ವಿಭಿನ್ನ ನಿಲುವು ವ್ಯಕ್ತಪಡಿಸಿದ್ದರು. ಜಾಮೀನು ನೀಡುವ ಪ್ರಶ್ನೆಯಲ್ಲಿ ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ. ಆದ್ದರಿಂದ ಈ ವಿಷಯವನ್ನು ಉನ್ನತ ಪೀಠಕ್ಕೆ ನಿಯೋಜಿಸುವಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ನ್ಯಾಯಮೂರ್ತಿಗಳು ಕೋರಿದ್ದರು.
ಅಂತೆಯೇ, ಮೂವರು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಎ.ಎಸ್.ಬೋಪಣ್ಣ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠ ಇಂದು ರಾತ್ರಿ ವಿಚಾರಣೆ ಕೈಗೆತ್ತಿಕೊಂಡಿತು. ಈ ವೇಳೆ, ಹೈಕೋರ್ಟ್ ಆದೇಶಕ್ಕೆ ಮೇಲ್ಮನವಿ ಸಲ್ಲಿಸಲು ಸೆಟಲ್ವಾಡ್‌ಗೆ ಸಮಯ ನಿರಾಕರಿಸಿದ್ದನ್ನು ನ್ಯಾಯ ಪೀಠ ಪ್ರಶ್ನಿಸಿತು. ಸಾಮಾನ್ಯ ಕ್ರಿಮಿನಲ್ ಕೂಡ ಕೆಲವು ಮಧ್ಯಂತರ ಪರಿಹಾರಕ್ಕೆ ಅರ್ಹರು. ತೀಸ್ತಾ ಸೆಟಲ್ವಾಡ್‌ಗೆ ಬಂಧನದಿಂದ ರಕ್ಷಣೆಯನ್ನು ಹೈಕೋರ್ಟ್ ವಿಸ್ತರಿಸಿದರೆ ಆಕಾಶ ಕುಸಿಯುತ್ತದೆಯೇ ಎಂದು ನ್ಯಾಯ ಪೀಠ ಕೇಳಿತು.
ಹೈಕೋರ್ಟ್ ಏನು ಮಾಡಿದೆ ಎಂಬುದಕ್ಕೆ ನಾವು ಆಶ್ಚರ್ಯಚಕಿತರಾಗಿದ್ದೇವೆ. ಗಾಬರಿಗೊಳಿಸುವ ತುರ್ತು ಏನು?. ಒಬ್ಬ ವ್ಯಕ್ತಿಯು ಹಲವಾರು ತಿಂಗಳುಗಳವರೆಗೆ ಮಧ್ಯಂತರ ರಕ್ಷಣೆಯಲ್ಲಿರುವಾಗ, ಆ ವ್ಯಕ್ತಿಗೆ ಇನ್ನೂ ಒಂದು ವಾರದ ಹಕ್ಕು ಇಲ್ಲವೇ?. ಒಂದು ವಾರದವರೆಗೆ ಮಧ್ಯಂತರ ರಕ್ಷಣೆ ನೀಡದೆ ನ್ಯಾಯಾಧೀಶರು ಸಂಪೂರ್ಣವಾಗಿ ತಪ್ಪು ಮಾಡಿದ್ದಾರೆ ಎಂದು ಹೇಳಲು ನಾವು ವಿಷಾದಿಸುತ್ತೇವೆ. ಈ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿರುವುದಾಗ ಅದನ್ನು ಒಂದು ವಾರ ವಿಸ್ತರಿಸುವುದು ಸೂಕ್ತವಾಗಿದೆ ಎಂದೂ ನ್ಯಾಯ ಪೀಠ ಹೇಳಿದೆ.
ಏನಿದು ಪ್ರಕರಣ?: 2002ರ ಗೋಧ್ರಾ ನಂತರದ ಗಲಭೆ ಪ್ರಕರಣಗಳಲ್ಲಿ ಅಮಾಯಕರನ್ನು ಸಿಲುಕಿಸಲು ನಕಲಿ ಸಾಕ್ಷ್ಯಗಳನ್ನು ಸೃಷ್ಟಿಸಿದ ಆರೋಪವನ್ನು ತೀಸ್ತಾ ಸೆಟಲ್ವಾಡ್ ಎದುರಿಸುತ್ತಿದ್ದಾರೆ. ಈ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿರುವ ಗುಜರಾತ್ ಪೊಲೀಸರು ಕಳೆದ ವರ್ಷ ಜೂನ್ 25ರಂದು ಬಂಧಿಸಿದ್ದರು. ನಂತರ ಅಹಮದಾಬಾದ್‌ನ ಸೆಷನ್ಸ್ ನ್ಯಾಯಾಲಯ ಹಾಗೂ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಆಗ ಮಧ್ಯಂತರ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸೆಪ್ಟೆಂಬರ್ 2ರಂದು ಸುಪ್ರೀಂ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಇದರಿಂದ ಸೆಪ್ಟೆಂಬರ್ 3ರಂದು ಸಬರಮತಿ ಜೈಲಿನಿಂದ ತೀಸ್ತಾ ಬಿಡುಗಡೆಗೊಂಡಿದ್ದರು. ಇಂದು ಮತ್ತೆ ತೀಸ್ತಾ ಸೆಟಲ್ವಾಡ್ ಅರ್ಜಿ ಗುಜರಾತ್ ಹೈಕೋರ್ಟ್ ಮುಂದೆ ಬಂದಿತ್ತು. ಇದರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ನಿರ್ಜರ್ ದೇಸಾಯಿ ಅವರ ಪೀಠ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ತೀಸ್ತಾ ಸೆಟಲ್ವಾಡ್ ಮತ್ತೆ ಸುಪ್ರೀಂ ಮೊರೆ ಹೋಗಿದ್ದರು.
ಇದನ್ನೂ ಓದಿ: ಗುಜರಾತ್ ಹೈಕೋರ್ಟ್ ಜಾಮೀನು ತಿರಸ್ಕರಿಸಿದ ಬೆನ್ನಲ್ಲೇ ಸುಪ್ರೀಂ ಮೊರೆ ಹೋದ ತೀಸ್ತಾ: ನ್ಯಾಯಮೂರ್ತಿಗಳಿಂದ ವಿಭಿನ್ನ ನಿಲುವು