ನವದೆಹಲಿ: ಜಾರ್ಖಂಡ್‌ನಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಹತ್ಯೆ ಪ್ರಕರಣ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದು ಸುಪ್ರೀಂಕೋರ್ಟ್ ಸುಮೋಟೋ ಪ್ರಕರಣವನ್ನಾಗಿ ಕೈಗೆತ್ತಿಕೊಂಡಿದೆ. ನ್ಯಾಯಾಂಗದ ಅಧಿಕಾರಿಗಳ ಮೇಲಿನ ದಾಳಿಗಳನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಎನ್.ವಿ.ರಮಣ ಹಾಗೂ ನ್ಯಾ.ಸೂರ್ಯಕಾಂತ್ ಅವರನ್ನೊಳಗೊಂಡ ಪೀಠವು ಎಲ್ಲಾ ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿದೆ.
'ಒಂದು ವಾರದೊಳಗೆ ವರದಿ ಕೊಡಿ'
ಒಂದು ವಾರದೊಳಗೆ ಪ್ರಕರಣದ ವರದಿ ಸಲ್ಲಿಸುವಂತೆ ಜಾರ್ಖಂಡ್ ಮುಖ್ಯ ಕಾರ್ಯದರ್ಶಿ, ಡಿಜಿಪಿಗೆ ಸೂಚಿಸಿದ್ದಾರೆ. ಜಾರ್ಖಂಡ್ ಹೈಕೋರ್ಟ್ ಪ್ರಕರಣದ ತನಿಖೆಯನ್ನು ನೋಡಿಕೊಳ್ಳಲಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಸ್ಪಷ್ಟಪಡಿಸಿದರು.
ಇದನ್ನೂ ಓದಿ: Judge Death Case: ಆಟೋ ಚಾಲಕ ಅರೆಸ್ಟ್.. ಸಾವಿನ ಸುತ್ತ ಅನುಮಾನಗಳ ಹುತ್ತ
ಕಳೆದ ಬುಧವಾರ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ನ್ಯಾಯಾಧೀಶ ಉತ್ತಮ್ ಆನಂದ್ ಅವರಿಗೆ ಹಿಂದಿನಿಂದ ಬಂದ ಆಟೋ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನ್ಯಾಯಾಧೀಶರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.