ನವದೆಹಲಿ: ಪೂಜೆ ಮಾಡುವಾಗ 'ಅಸಂಪ್ರದಾಯಿಕ ಪೂಜಾ ವಿಧಾನ' ಅನುಸರಿಸಿದ್ದಾರೆ ಎಂದು ಆರೋಪಿಸಿ ವೆಂಕಟೇಶ್ವರ ಸ್ವಾಮಿಯ ಭಕ್ತರೊಬ್ಬರು ಸಲ್ಲಿಸಿರುವ ಅರ್ಜಿಗೆ ಉತ್ತರ ನೀಡುವಂತೆ ತಿರುಪತಿ ತಿಮ್ಮಪ್ಪ ದೇವಾಲಯದ ಆಡಳಿತ ಮಂಡಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಆಂಧ್ರಪ್ರದೇಶದ ತಿರುಮಲದಲ್ಲಿರುವ ತಿರುಪತಿ ತಿಮ್ಮಪ್ಪ ದೇಗುಲದಲ್ಲಿ ವೆಂಕಟೇಶ್ವರ ಸ್ವಾಮಿಗೆ ಅಭಿಷೇಕ, ಅರ್ಜಿತ ಬ್ರಹ್ಮೋಸ್ತವಂ, ತೋಮಲ ಸೇವೆ, ವಾರ್ಷಿಕ ಬ್ರಹ್ಮೋತ್ಸವ ಸೇರಿ ವಿವಿಧ ಸೇವೆಗಳನ್ನು ಅಸಂಪ್ರದಾಯಿಕ ಹಾಗೂ ತಪ್ಪು ವಿಧಾನಗಳೊಂದಿಗೆ ಆಚರಿಸಲಾಗಿದೆ ಎಂದು ಭಕ್ತರೊಬ್ಬರು ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆನ್‌ಲೈನ್ ಟಿಕೆಟ್ ಬಿಡುಗಡೆ ಮಾಡಿದ ಟಿಟಿಡಿ.. ಅರ್ಧಗಂಟೆಯಲ್ಲೇ ಖಾಲಿ
ಈ ಅರ್ಜಿಯ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ನ್ಯಾಯ ಪೀಠವು "ನಾವು ಯಾವಾಗ ಮತ್ತು ಹೇಗೆ ಪೂಜೆ ಮಾಡಬೇಕೆಂಬುದರ ಬಗ್ಗೆ ಮಧ್ಯಪ್ರವೇಶಿಸಬಹುದೇ? ಇದು ಸಾಂವಿಧಾನಿಕ ನ್ಯಾಯಾಲಯವೇ ಹೊರತು ಕೆಳ ನ್ಯಾಯಾಲಯ ಅಲ್ಲ. ಆದರೆ, ನಾವೆಲ್ಲರೂ ಬಾಲಾಜಿಯ ಭಕ್ತರು ಮತ್ತು ಸಂಪ್ರದಾಯಗಳ ಪ್ರಕಾರ ಎಲ್ಲ ಆಚರಣೆಗಳನ್ನು ನಡೆಸಲಾಗುವುದು ಎಂದು ನಿರೀಕ್ಷಿಸುತ್ತೇವೆ" ಎಂದು ಹೇಳಿತು.
ಬಳಿಕ ನ್ಯಾಯಾಧೀಶರಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು, ಈ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ದೇವಾಲಯದ ಆಡಳಿತ ಮಂಡಳಿಯಾದ 'ತಿರುಮಲ ತಿರುಪತಿ ದೇವಸ್ಥಾನಂ' (ಟಿಟಿಡಿ)ಗೆ ಸೂಚನೆ ನೀಡಿತು.