ನವದೆಹಲಿ/ಬೆಂಗಳೂರು: ಖಾಸಗಿ ವ್ಯಕ್ತಿಯೊಬ್ಬರು ಎಸಿಬಿ ರದ್ದುಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಹ ಮೊದಲು ಒಪ್ಪಿಗೆ ಸೂಚಿಸಿತ್ತು. ಆದ್ರೆ ವಿಚಾರಣೆ ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದೆ.
2016ರಲ್ಲಿ ಸ್ಥಾಪಿಸಲಾದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಯನ್ನು ರದ್ದುಗೊಳಿಸುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಕನಕರಾಜು ಎಂಬುವರು ಸಲ್ಲಿಸಿರುವ ಅರ್ಜಿಯು ಆಗಿನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮನಣ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಿಟಿ ರವಿಕುಮಾರ್ ಅವರ ಪೀಠದ ಮುಂದೆ ಬಂದಿತ್ತು. ಈ ಅರ್ಜಿಯನ್ನು ವಿಚಾರಣೆಗೆ ಲಿಸ್ಟ್ ಮಾಡಲು ಪೀಠ ಒಪ್ಪಿಗೆ ಸೂಚಿಸಿತ್ತು. ಅರ್ಜಿದಾರರ ಪರವಾಗಿ ವಕೀಲ ಅಶೋಕ ಪಾಣಿಗ್ರಾಹಿ ಎಂಬುವರು ಅರ್ಜಿ ಸಲ್ಲಿಸಿದ್ದರು. ಆದ್ರೆ ಇಂದು ಈ ಅರ್ಜಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಅರ್ಜಿದಾರರು ತಮಗೆ ಲಂಚದ ಬೇಡಿಕೆ ಇಟ್ಟಿದ್ದ ಬೆಸ್ಕಾಂ ವಿಚಕ್ಷಣಾ ದಳ ಠಾಣೆಯ ಇಬ್ಬರು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ಆದರೆ ಈ ಮಧ್ಯೆ ಎಸಿಬಿಯನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಎಲ್ಲ ಪ್ರಕರಣಗಳನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ವರ್ಗಾಯಿಸಿತ್ತು.
ಈ ಹಂತದಲ್ಲಿ ಎಸಿಬಿಯನ್ನು ರದ್ದುಗೊಳಿಸುವುದು ಮತ್ತು ಆ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸುವುದರಿಂದ ಆರೋಪಿ ವ್ಯಕ್ತಿಗಳಿಗೆ ವರದಾನವಾಗಬಹುದು. ಭ್ರಷ್ಟಾಚಾರ ತಡೆ ಕಾಯ್ದೆ 1988 ರ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಕ್ರಿಮಿನಲ್ ವಿಷಯಗಳ ತನಿಖೆ ಮತ್ತು ಅದರ ಪರಿಣಾಮ ಮತ್ತು ಇತರ ಪ್ರಕರಣಗಳು ಅಪಾಯಕ್ಕೆ ಸಿಲುಕುತ್ತವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಭ್ರಷ್ಟ ರಾಜಕಾರಣಿಗಳು, ಸಚಿವರು ಮತ್ತು ಅಧಿಕಾರಿಗಳನ್ನು ಲೋಕಾಯುಕ್ತರ ಕಾವಲು ಕಣ್ಣುಗಳಿಂದ ರಕ್ಷಿಸುವುದಕ್ಕಾಗಿಯೇ ರಾಜ್ಯ ಸರ್ಕಾರವು ಎಸಿಬಿಯನ್ನು ಸ್ಥಾಪಿಸಿದೆ ಎಂದು ಕಟುವಾಗಿ ಚಾಟಿ ಬೀಸಿದ್ದ ಹೈಕೋರ್ಟ್ ಆಗಸ್ಟ್ 11 ರಂದು ಎಸಿಬಿಯನ್ನು ರದ್ದುಗೊಳಿಸಿತ್ತು.