ನವದೆಹಲಿ: ದೇಶದ ರಹಸ್ಯ ಮಾಹಿತಿಗಳನ್ನು ತಮ್ಮ ಪುಸ್ತಕದಲ್ಲಿ ಅಳವಡಿಸಿದ್ದಕ್ಕೆ ನಿವೃತ್ತ ಮೇಜರ್ ಜನರಲ್ ವಿ ಕೆ ಸಿಂಗ್ ಅವರ ವಿರುದ್ಧ ದಾಖಲಾದ ಎಫ್‌ಐಆರ್ ಮತ್ತು ಚಾರ್ಜ್ಶೀಟ್ ಅನ್ನು ವಜಾಗೊಳಿಸಲು ನಿರಾಕರಿಸಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ. ಇದೇ ವೇಳೆ ವಿಕೆ ಸಿಂಗ್ ಅರ್ಜಿಯನ್ನು ತಿರಸ್ಕರಿಸಿತು.
2007ರಲ್ಲಿ ವಿಕೆ ಸಿಂಗ್ ಅವರು ವಿರಚಿತ 'ಇಂಡಿಯಾಸ್ ಎಕ್ಸ್‌ಟರ್ನಲ್ ಇಂಟೆಲಿಜೆನ್ಸ್-ಸೀಕ್ರೆಟ್ಸ್ ಆಫ್ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್' ಎಂಬ ಪುಸ್ತಕದಲ್ಲಿ ದೇಶದ ರಹಸ್ಯ ಮಾಹಿತಿಯನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ ಎಫ್‌ಐಆರ್ ದಾಖಲಿಸಿ, ಆರೋಪಪಟ್ಟಿಯನ್ನೂ ಸಲ್ಲಿಸಿದೆ. ಇದನ್ನು ರದ್ದು ಮಾಡಬೇಕು ಎಂದು ನಿವೃತ್ತ ಮೇಜರ್ ಜನರಲ್ ಸುಪ್ರೀಂಕೋರ್ಟ್ನಲ್ಲಿ ಮನವಿ ಮಾಡಿದ್ದರು.
ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ಪೀಠದ ಮುಂದೆ ಸಿಂಗ್ ಅವರ ಪರ ಹಿರಿಯ ವಕೀಲರಾದ ಮಹಾಲಕ್ಷ್ಮಿ ಪಾವನಿ ಅವರು ವಾದಿಸಿ, ಇದು ದುರುದ್ದೇಶ ಮತ್ತು ಪೂರ್ವ ನಿಯೋಜಿತವಾಗಿದೆ ಎಂದರು. ಆಗ ಜಡ್ಜ್ ಮಿಶ್ರಾ ಅವರು, ನೀವು ದೇಶದ ವಿರುದ್ಧವೇ ಸೇಡು ತೀರಿಸಿಕೊಳ್ಳಲು ಬಯಸುತ್ತೀರಾ? ಎಂದು ಪ್ರಶ್ನಿಸಿದರು. ವಕೀಲರು ಇಲ್ಲ ಎಫ್‌ಐಆರ್ ಕಾನೂನುಬಾಹಿರವಾಗಿದೆ ಎಂದರು.
ಅರ್ಜಿ ನಿರಾಕರಣೆ, ವಾಪಸ್ಗೆ ಸೂಚನೆ: ವಾದ ಆಲಿಸಿದ ಬಳಿಕ ಕೋರ್ಟ್, ಸಿಂಗ್ ಅವರ ವಕೀಲರಿಗೆ ಅರ್ಜಿಯನ್ನು ವಾಪಸ್ ಪಡೆಯಲು ಸೂಚಿಸಿತು. ಜೊತೆಗೆ ಕೇಸ್ನಿಂದ ಖುಲಾಸೆ ಮಾಡಲು ಕೋರಿ ಟ್ರಯಲ್ ಕೋರ್ಟ್ಗೆ ಮನವಿ ಸಲ್ಲಿಸಲು ಅವಕಾಶ ಕೊಟ್ಟಿತು. ಇದೇ ವೇಳೆ ವಿಚಾರಣಾ ಕೋರ್ಟ್ ಮೇಲೆ ಯಾವುದೇ ಪ್ರಭಾವ ಬೀರುವಂತಿಲ್ಲ ಎಂದೂ ಸೂಚನೆ ನೀಡಿತು.
ದೆಹಲಿ ಹೈಕೋರ್ಟ್ ಹೇಳಿದ್ದೇನು?: ಈ ವರ್ಷದ ಮೇ ತಿಂಗಳಿನಲ್ಲಿ ದೆಹಲಿ ಹೈಕೋರ್ಟ್‌ನ ಏಕ ಸದಸ್ಯ ಪೀಠವು ಸಿಬಿಐ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಅಧಿಕಾರಿಗಳ ಹೆಸರು, ಗೌಪ್ಯ ಸ್ಥಳಗಳು ಮತ್ತು ಸಚಿವರ ಹೆಸರುಗಳನ್ನು ಬಹಿರಂಗಪಡಿಸಿದ್ದು ತಪ್ಪೆಂದು ಹೇಳಿತ್ತು. ಗುಪ್ತಚರ ಸಂಸ್ಥೆಯಾದ 'ರಾ' ಹೊಣೆಗಾರಿಕೆ ಮತ್ತು ಭ್ರಷ್ಟಾಚಾರ ವಿಷಯಗಳನ್ನು ಎತ್ತಿ ತೋರಿಸಲು ಪ್ರಯತ್ನಿಸಿರುವುದು ಸರಿಯಲ್ಲ ಎಂದು ಹೇಳಿತ್ತು. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆಯೂ, ದ್ವೇಷ ಸಾಧನೆಗಾಗಿ ತನ್ನ ವಿರುದ್ಧ ದೋಷಾರೋಪಣೆ ಮಾಡಲಾಗಿದೆ ಎಂದು ವಾದಿಸಿದ್ದರು.
ಅಂದಿನ ಸರ್ಕಾರದ ಸಚಿವ ಸಂಪುಟ ಸಮಿತಿಯ ಉಪ ಕಾರ್ಯದರ್ಶಿಯಾಗಿದ್ದ ಬಿ ಭಟ್ಟಾಚಾರ್ಜಿ ಅವರು ಸಲ್ಲಿಸಿದ ದೂರಿನ ಮೇರೆಗೆ ಸಿಬಿಐ ಸೆಪ್ಟೆಂಬರ್ 20, 2007 ರಂದು ವಿಕೆ ಸಿಂಗ್ ವಿರುದ್ಧ ಅಧಿಕೃತ ರಹಸ್ಯ ಕಾಯಿದೆಯಡಿ ಪ್ರಕರಣ ದಾಖಲಿಸಿತ್ತು.
ಇದನ್ನೂ ಓದಿ: ಕಾಂಗ್ರೆಸ್ 'ನಕ್ಸಲರ ಗುಂಪಿನಿಂದ ನಡೆಯುತ್ತಿರುವ ಕಂಪನಿ'.. ಪ್ರಧಾನಿ ನರೇಂದ್ರ ಮೋದಿ ಆರೋಪ