ನವದೆಹಲಿ: ಅತ್ಯಾಚಾರ ಪ್ರಕರಣದ ಅಪರಾಧಿಗೆ 7.5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಛತ್ತೀಸ್ಗಢ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ಅಪರಾಧಿಗೆ ಕೋರ್ಟ್ ವಿಧಿಸಿದ ಶಿಕ್ಷೆಯ ಅವಧಿ ಮುಗಿದರೂ ಆತನನ್ನು ಹೆಚ್ಚು ಕಾಲ ಜೈಲಿನಲ್ಲಿಡಲಾಗಿತ್ತು. ಈ ಕಾರಣಕ್ಕೆ ಪರಿಹಾರ ನೀಡುವಂತೆ ಕೋರ್ಟ್ ಸೂಚಿಸಿತು.
ವಿವರ: ಅತ್ಯಾಚಾರ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಭೋಲಾ ಎಂಬಾತನಿಗೆ ಛತ್ತೀಸ್ಗಢ ಹೈಕೋರ್ಟ್ ಹನ್ನೆರಡು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಿತ್ತು. ಆದರೆ, 2018ರಲ್ಲಿ ಅಪರಾಧಿಯ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಿದ ಹೈಕೋರ್ಟ್, ಏಳು ವರ್ಷಗಳ ಕಠಿಣ ಜೈಲು ಸಜೆಯಾಗಿ ಪರಿವರ್ತಿಸಿದೆ. ಶಿಕ್ಷೆ ಪೂರ್ಣಗೊಳಿಸಿದರೂ ತನ್ನನ್ನು ಬಿಡುಗಡೆಗೊಳಿಸಿದ ನಡೆ ಪ್ರಶ್ನಿಸಿ, ಭೋಲಾ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.
ಬುಧವಾರ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಸಿ.ಟಿ. ರವಿಕುಮಾರ್ ಅವರಿದ್ದ ನ್ಯಾಯಪೀಠವು ಈ ಅರ್ಜಿ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ಅಪರಾಧಿ 10 ವರ್ಷ, 03 ತಿಂಗಳು ಮತ್ತು 16 ದಿನಗಳ ಕಾಲ ಸೆರೆವಾಸದಲ್ಲಿರುವುದು ದಾಖಲಾತಿಗಳಿಂದ ಗೊತ್ತಾಗಿದೆ. ಕೋರ್ಟ್ ವಿಧಿಸಿದ ಶಿಕ್ಷೆಯ ಅವಧಿಗಿಂತ ಹೆಚ್ಚು ಕಾಲ ಆತನನ್ನು ಜೈಲಿನಲ್ಲಿಯೇ ಇಡಲಾಗಿತ್ತು. ಇದಕ್ಕೆ ಗರಂ ಆದ ಸುಪ್ರಿಂಕೋರ್ಟ್, ರಾಜ್ಯದ ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್‌ಗೆ ಛೀಮಾರಿ ಹಾಕಿದೆ. ಜೊತೆಗೆ, ಛತ್ತೀಸ್ ಗಢ ಸರ್ಕಾರ ಸಂತ್ರಸ್ತ ಅಪರಾಧಿಗೆ 7.5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ತಾಕೀತು ಮಾಡಿದೆ.
ಇದನ್ನೂ ಓದಿ: ಹಿಜಾಬ್: ಕರ್ನಾಟಕ ಹೈಕೋರ್ಟ್ ತೀರ್ಪು ವಿರುದ್ಧದ ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ