ನವದೆಹಲಿ : ನೀಟ್ ಪಿಜಿ ಪ್ರವೇಶದಲ್ಲಿ ಇಡಬ್ಲ್ಯುಎಸ್ ವರ್ಗದ ಮೀಸಲು ಕೋಟಾಗೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.
2021-22ನೇ ಸಾಲಿಗೆ ಒಬಿಸಿಗಳಿಗೆ ಶೇ.27 ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇ.10ರಷ್ಟು ಕೋಟಾದೊಂದಿಗೆ ನೀಟ್ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ಆರ್ಥಿಕವಾಗಿ ದುರ್ಬಲ ವರ್ಗದ (EWS)ವರಿಗೆ ನೀಟ್-ಪಿಜಿ ಮತ್ತು ಯುಜಿ ಪ್ರವೇಶದಲ್ಲಿ ಮೀಸಲಾತಿ ಕುರಿತಾದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ಒಬಿಸಿಗಳಿಗೆ ಶೇ.27 ಪ್ರತಿಶತ ಮೀಸಲಾತಿ ನೀಡುವ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿದ್ದಾರೆ. ಜೊತೆಗೆ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಈ ವರ್ಷ ಶೇ.10 ಮೀಸಲಾತಿ ಅನ್ವಯಿಸುತ್ತದೆ ಎಂದು ತಿಳಿಸಿ ಅಂತಿಮ ತೀರ್ಪು ನೀಡಿದ್ದಾರೆ.