ಪ್ರಾಣಿಗಳಲ್ಲಿ ಕೋವಿಡ್ ಸೋಂಕಿನ ಪರೀಕ್ಷೆಗಾಗಿ ವಿಶೇಷ ವಿಧಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಿಸಿಎಂಬಿ ನಿರ್ದೇಶಕ ರಾಕೇಶ್ ಮಿಶ್ರಾ ಹೇಳಿದರು.
ವೈರಸ್ ಯಾವುದೇ ಜೀವಿಗಳ ಮೇಲೆ ಪರಿಣಾಮ ಬೀರಬಹುದು. ಅದಕ್ಕಾಗಿಯೇ ಪ್ರಾಣಿಗಳಿಗೆ ಸೋಂಕು ಹರಡುವ ವೈರಸ್‌ಗಳು ಮನುಷ್ಯರಿಗೆ ಹರಡುತ್ತವೆ. ಕೊರೊನಾ ವೈರಸ್ ಅಂತಹದೇ ಒಂದು ರೀತಿಯ ಮಾರಕ ಜೂನೋಟಿಕ್ ಸೋಂಕಾಗಿದೆ ಎಂದು ಅವರು ಹೇಳಿದ್ರು.
ಪ್ರಾಣಿಗಳಲ್ಲಿ ಕೋವಿಡ್ 19 ಅನ್ನು ಪತ್ತೆಹಚ್ಚಲು CCMB(Centre for Cellular and Molecular Biology) ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಅಭಿವೃದ್ಧಿಪಡಿಸುತ್ತಿದೆ. ಇದರ ಫಲಿತಾಂಶಗಳನ್ನು ಶೀಘ್ರದಲ್ಲೇ ಭಾರತದ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಕಳುಹಿಸಲಾಗುವುದು ಎಂದು ಮಿಶ್ರಾ ತಿಳಿಸಿದ್ದಾರೆ.
ಪ್ರಾಣಿಗಳಲ್ಲಿ ಮೂಗು ಅಥವಾ ಗಂಟಲಿನ ಸ್ವ್ಯಾಬ್‌ಗಳ ಮೂಲಕ ಮಾದರಿಯನ್ನು ಸಂಗ್ರಹಿಸುವುದು ಕಷ್ಟಕರವಾದ ಕಾರಣ, ಸಿಸಿಎಂಬಿ ತಂಡವು, ಪ್ರಾಣಿಗಳ ಮಲದಲ್ಲಿ SARS-CoV-2 ಇರುವಿಕೆಯನ್ನು ಕಂಡುಹಿಡಿಯಲು ಪರೀಕ್ಷೆಯನ್ನು ನಡೆಸಿದೆ.
ಹೈದರಾಬಾದ್ ಮೃಗಾಲಯದಲ್ಲಿರುವ ಏಷಿಯಾಟಿಕ್ ಸಿಂಹಗಳಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ, ಸೋಂಕು ಹರಡುವಿಕೆಯನ್ನು ನಿಯಂತ್ರಿಸುವುದು ಮುಖ್ಯ ಎಂದು ಅವರು ಹೇಳಿದರು.
ಇಲ್ಲದಿದ್ದರೆ, ಸೋಂಕಿತ ಪ್ರಾಣಿಗಳಿಂದ ಹೊಸ ತಳಿಗಳು ಮನುಷ್ಯರನ್ನು ಮತ್ತಷ್ಟು ಕಾಡುವ ಸಂಭವವಿದೆ. ರಸ್ತೆಗಳು ಮತ್ತು ತೆರೆದ ಪ್ರದೇಶಗಳಲ್ಲಿ ಪಿಪಿಇ ಕಿಟ್‌ಗಳು ಮತ್ತು ಮಾಸ್ಕ್ಗಳನ್ನು ವಿಲೇವಾರಿ ಮಾಡುವುದು ಒಳ್ಳೆಯದಲ್ಲ. ಯಾಕೆಂದರೆ, ಪ್ರಾಣಿಗಳು ಇವುಗಳನ್ನು ತಿನ್ನುವ ಸಂಭವ ಹೆಚ್ಚಿರುತ್ತದೆ.
ಅಲ್ಲದೇ ಕೊರೊನಾ ಲಕ್ಷಣಗಳಿರುವ ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿ ಐಸೋಲೇಟ್ ಮಾಡಬೇಕು.ಪ್ರಸ್ತುತ, B1.617 (ಡಬಲ್ ರೂಪಾಂತರಿತ ತಳಿ) ಮತ್ತು B1.1.7 (ಯುಕೆ ರೂಪಾಂತರಿ ತಳಿ) ರೂಪಾಂತರಗಳು ದೇಶದಲ್ಲಿ ಹೆಚ್ಚಾಗಿವೆ ಎಂದು ರಾಕೇಶ್ ಮಿಶ್ರಾ ಹೇಳಿದ್ರು.