ಬೆಂಗಳೂರು : ನಗರದ ಜಯನಗರ ವಿಧಾನಸಭಾ ಕ್ಷೇತ್ರದ ವಿನಾಯಕ ದೇವಸ್ಥಾನದ ಆವರಣದಲ್ಲಿ ಬಾಂಧವ ಸಮಾಜ ಸೇವಾ ಸಂಘಟನೆ ಸಹಯೋಗದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ 'ಸಂಕ್ರಾಂತಿ ಉತ್ಸವ' ಗೋವುಗಳ ಅಲಂಕಾರ ಪೂಜೆ, ಪೊಂಗಲ್ ಸಂಭ್ರಮ ಮತ್ತು ಸಾರ್ವಜನಿಕರಿಗೆ ಕಬ್ಬು, ಎಳ್ಳು, ಬೆಲ್ಲ ವಿತರಣಾ ಕಾರ್ಯಕ್ರಮ ನಡೆಯಿತು.
ಪೌರ ಕಾರ್ಮಿಕರ ಜತೆ ಸಂಕ್ರಾಂತಿ ಸಂಭ್ರಮ : ಗೋವುಗಳಿಗೆ ಪೂಜೆ ಸಲ್ಲಿಸಿ, ಸಂಕ್ರಾಂತಿ ಉತ್ಸವಕ್ಕೆ ಚಾಲನೆ ನೀಡಿo ಮಾಜಿ ಬಿಬಿಎಂಪಿ ಸದಸ್ಯ ಎನ್. ನಾಗರಾಜ್ ಈಟಿವಿ ಭಾರತದೊಂದಿಗೆ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಶಾಸಕಿ ಸೌಮ್ಯ ರೆಡ್ಡಿ ಸಹಕಾರದಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಜಯನಗರದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪೌರಕಾರ್ಮಿಕರ ಸಂಕ್ರಾಂತಿ ಉತ್ಸವ ಆಚರಿಸಲಾಗುತ್ತಿದೆ ಎಂದರು.
ಸಂಕ್ರಾಂತಿ ಸೂರ್ಯಾರಾಧನೆ ಹಬ್ಬ: ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ. ಮಕರ ಸಂಕ್ರಾಂತಿ ಪ್ರಸಿದ್ಧವಾಗಿರುವ ಸುಗ್ಗಿಯ ಕಾಲದ ಹಬ್ಬ. ಇದನ್ನು ಪೊಂಗಲ್ ಎಂದೂ ಕರೆಯಲಾಗುತ್ತದೆ.
ಪೊಂಗಲ್ ಎಂದರೆ ಅಕ್ಕಿ, ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲಗಳಿಂದ ಮಾಡಿದ ಸಿಹಿ ಖಾದ್ಯ. ಸುಗ್ಗಿಯ ಉತ್ಪನ್ನಗಳಿಂದ ಅಡುಗೆ ಮಾಡಿ ಬಂಧು ಬಾಂಧವರ ಜತೆ ಒಟ್ಟಾಗಿ ಸೇರಿ ಆಚರಣೆ ಮಾಡುವುದಾಗಿದೆ.
ಕರ್ನಾಟಕದಲ್ಲಿ ಎಳ್ಳು, ಸಕ್ಕರೆ ಅಚ್ಚುಗಳನ್ನು ನೆರೆಯವರಿಗೆ, ಬಂಧು-ಮಿತ್ರರಿಗೆ ಹಂಚುವ ಸಾಮಾಜಿಕ ಸಂಪ್ರದಾಯ ಹಾಗೂ ಗೋವುಗಳಿಗೆ ಪೂಜೆ ಮಾಡುವುದು ಈ ಹಬ್ಬದ ವಿಶೇಷ ಎಂದರು.
ಸಂಕ್ರಾಂತಿ ಹಬ್ಬ ಎಲ್ಲರ ಬಾಳಿನಲ್ಲಿ ಬೆಳಕು ತರಲಿ : ಕೊರೊನಾ ಎಂಬ ಸಾಂಕ್ರಾಮಿಕ ರೋಗ ಮುಕ್ತವಾಗಲಿ ಎಂದು ಸಂಕ್ರಾಂತಿ ಹಬ್ಬದ ಶುಭ ದಿನದಂದು ಪ್ರಾರ್ಥನೆ ಸಲ್ಲಿಸಲಾಗುವುದು. ದೇಶದ ಜೀವನಾಡಿ ರೈತ. ರೈತ ಉಳಿದರೆ ದೇಶ ಉಳಿಯುತ್ತದೆ. ಹಳ್ಳಿಯಲ್ಲಿ ಬೆಳೆದ ಕಬ್ಬನ್ನು ರೈತರಿಂದ ನೇರವಾಗಿ ಖರೀದಿ ಮಾಡಿ ರೈತ ಸಹಕಾರ ನೀಡುವುದು ನಮ್ಮ ಉದ್ದೇಶ ಎಂದರು.