ಮುಂಬೈ: ಮುಂಬೈನ ಪತ್ರಾ ಚಾಳ್ ಮರು ಅಭಿವೃದ್ಧಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ನ್ಯಾಯಾಂಗ ಬಂಧನವನ್ನು ಇಲ್ಲಿನ ವಿಶೇಷ ನ್ಯಾಯಾಲಯ ಸೋಮವಾರ ಸೆಪ್ಟೆಂಬರ್ 5 ರವರೆಗೆ ವಿಸ್ತರಿಸಿದೆ. ಗೋರೆಗಾಂವ್‌ನ ಉಪನಗರದಲ್ಲಿರುವ ಪತ್ರಾ ಚಾಳ್ (ವಠಾರ) ಮರುಅಭಿವೃದ್ಧಿಯಲ್ಲಿನ ಹಣಕಾಸಿನ ಅಕ್ರಮಗಳಿಗೆ ಸಂಬಂಧಿಸಿದಂತೆ 60 ವರ್ಷದ ರಾವುತ್ ಅವರನ್ನು ಆಗಸ್ಟ್ 1 ರಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು.
ಆರಂಭದಲ್ಲಿ ಇಡಿ ಕಸ್ಟಡಿಯಲ್ಲಿದ್ದ ರಾವುತ್ ಅವರನ್ನು ಆಗಸ್ಟ್ 8 ರಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ (ಆಗಸ್ಟ್ 22ರವರೆಗೆ) ಕಳುಹಿಸಲಾಗಿತ್ತು. ಈಗ ಮತ್ತೆ ಸೋಮವಾರ ಪ್ರಕರಣದ ವಿಚಾರಣೆ ನಡೆದಿದ್ದು, ರಾವುತ್ ಅವರ ನ್ಯಾಯಾಂಗ ಬಂಧನವನ್ನು ಆಗಸ್ಟ್ 30ರವರೆಗೆ ವಿಸ್ತರಿಸಿ ವಿಶೇಷ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ ಆದೇಶಿಸಿದರು. ಅಕ್ರಮಹಣ ವರ್ಗಾವಣೆ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿತು.
ಪತ್ರಾ ಚಾಳ್ನ ಮರುಅಭಿವೃದ್ಧಿಯಲ್ಲಿ ನಡೆದಿವೆ ಎನ್ನಲಾದ ಹಣಕಾಸು ಅಕ್ರಮಗಳು, ರಾವುತ್ ಅವರ ಪತ್ನಿ ಮತ್ತು ಸಹಚರರನ್ನು ಒಳಗೊಂಡಿರುವ ಹಣಕಾಸಿನ ವಹಿವಾಟುಗಳ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಶಿವಸೇನಾ ಅಧ್ಯಕ್ಷ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಆಪ್ತ ಸಹಾಯಕ ರಾವುತ್ ಅವರು ತಾವು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ ಮತ್ತು ತಮ್ಮ ವಿರುದ್ಧದ ಇಡಿ ಪ್ರಕರಣ ಸುಳ್ಳು ಎಂದಿದ್ದಾರೆ.