ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ವಿಪ್ಲವ ಸಂಭವಿಸಿರುವ ನಡುವೆ, ಶಿವಸೇನಾ ನಾಯಕ ಸಂಜಯ್ ರಾವುತ್ ಇಂದು ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ಜಾರಿ ಮಾಡಿದೆ. ಕೆಲಸ ಇರುವ ಕಾರಣ ವಿಚಾರಣೆಗೆ ಹಾಜರಾಗಲು ಆಗಲ್ಲ ಎಂದು ಸಂಜಯ್ ರಾವತ್ ನಿನ್ನೆಯೇ ಹೇಳಿದ್ದಾರೆ. ಹಾಗಾಗಿ ಇಂದು ಅವರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
ಸಂಜಯ್ ರಾವುತ್ ವಿಚಾರಣೆಗೆ ಹಾಜರಾಗದಿದ್ದರೆ ಇಡಿ ಏನು ಮಾಡುತ್ತದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಬಂಡಾಯ ಶಾಸಕರನ್ನು ಉದ್ದೇಶಿಸಿ ಸಂಜಯ್ ರಾವುತ್ ಟ್ವೀಟ್ ಸಮರ ಸಾರಿದ್ದಾರೆ. ಅಜ್ಞಾನವು ಒಂದು ರೀತಿಯ ಸಾವು.. ಮತ್ತು ಅಜ್ಞಾನ ಎಂಬುದು ಚಲಿಸುವ ಶವದಂತೆ ಎಂದು ಬರೆದುಕೊಂಡಿದ್ದಾರೆ.
ಕಳೆದ ಎರಡು ದಿನಗಳಿಂದ ಇಂತಹದ್ದೇ ಹೇಳಿಕೆಗಳನ್ನು ಸಂಜಯ್ ರಾವುತ್ ನೀಡುತ್ತಿದ್ದಾರೆ. ಭಾನುವಾರ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡಿದ್ದ ರಾವುತ್, ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಮರಾಠಿಯಲ್ಲಿ ಜೀವಂತ ಶವ ಎಂಬುದು ಒಂದು ಪದ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದರು.
ಏನಿದು ಪ್ರಕರಣ: ಗೋರೆಗಾಂವ್‌ನ ಪತ್ರಾಚಲ್ ಜಮೀನು ಪ್ರಕರಣದಲ್ಲಿ ಸಂಜಯ್ ರಾವುತ್ ವಿರುದ್ಧ 1,034 ಕೋಟಿ ರೂ.ಗಳ ಅಕ್ರಮ ಎಸಗಲಾಗಿದೆ ಎಂಬ ಆರೋಪ ಇದೆ. ಇಲ್ಲಿನ ಅಕ್ರಮ ಹಣದಲ್ಲಿ ರಾವುತ್ ಅವರು ಅಲಿಬಾಗ್ ನಲ್ಲಿ ಜಮೀನು ಖರೀದಿಸಿದ್ದರು ಎಂದು ಹೇಳಲಾಗಿದೆ. ಸಂಜಯ್ ರಾವುತ್ ಅವರ ಆಪ್ತ ಸ್ನೇಹಿತ ಪ್ರವೀಣ್ ರಾವುತ್ ಅವರನ್ನು ಪತ್ರಾಚಲ ಭೂ ಹಗರಣ ಪ್ರಕರಣದಲ್ಲಿ ಇಡಿ ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.
ಇದನ್ನು ಓದಿ:ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಉದ್ಧವ್.. ಮನವೊಲಿಸಿದ ಶರದ್ ಪವಾರ್