ಮುಂಬೈ (ಮಹಾರಾಷ್ಟ್ರ): ಗಣೇಶ ಹಬ್ಬದಂದು ಸಂಸತ್ತಿನ ವಿಶೇಷ ಅಧಿವೇಶನ ಕರೆದಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಶಿವಸೇನಾ ಪಕ್ಷದ ನಾಯಕ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಅವರು ಸೆಪ್ಟೆಂಬರ್ 18-22ರ ವರೆಗೆ ಸಂಸತ್ತಿನ ವಿಶೇಷ ಅಧಿವೇಶನ ಇರುವುದಾಗಿ ಘೋಷಿಸಿದ್ದಾರೆ. ಆದರೆ, ಅಧಿವೇಶನದಲ್ಲಿ ಯಾವುದಾದರೂ ಮುಖ್ಯವಾದ ಮಸೂದೆ ಪಾಸ್ ಮಾಡಲಾಗುವುದೇ ಎಂಬ ಬಗ್ಗೆ ತಿಳಿಸಿಲ್ಲ.
''ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದ್ದಾರೆ. ಆದರೆ ಯಾರೊಬ್ಬರಿಗೂ ಈ ಅಧಿವೇಶನ ಯಾಕೆ ಕರೆದಿದ್ದಾರೆ ಎಂಬುದು ಗೊತ್ತಿಲ್ಲ. ಗುಜರಾತ್ನಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಜನ ಹೇಗೆ ಹೊರರಾಜ್ಯಗಳಿಗೆ ಹೋಗುವುದಿಲ್ಲವೋ, ಹಾಗೆಯೇ ಮಹಾರಾಷ್ಟ್ರದಲ್ಲಿ ಗಣೇಶ ಹಬ್ಬದ ವೇಳೆ ಯಾರೊಬ್ಬರೂ ಹೊರ ರಾಜ್ಯಗಳಿಗೆ ಹೋಗುವುದಿಲ್ಲ'' ಎಂದು ಶಿವಸೇನಾ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಮಹಾರಾಷ್ಟ್ರವನ್ನು ಕಡೆಗಣಿಸುತ್ತಾ ಬಂದಿದೆ: ನವರಾತ್ರಿ ಹಬ್ಬ ಹಾಗೂ ಇತರೆ ಕಾರ್ಯಕ್ರಮಗಳ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಎಂದಿಗೂ ಸಂಸತ್ತಿನ ಅಧಿವೇಶನವನ್ನು ಕರೆಯುವುದಿಲ್ಲ. ಆದರೆ, ಮಹಾರಾಷ್ಟ್ರದ ಅಮೃತಕಾಲದ ಸಮಯದಲ್ಲಿ ಈ ಅಧಿವೇಶನವನ್ನು ಕರೆಯಲಾಗಿದೆ. ಕಳೆದ 10 ವರ್ಷಗಳಿಂದಲೂ ಕೇಂದ್ರ ಸರ್ಕಾರ ಮಹಾರಾಷ್ಟ್ರವನ್ನು ಕಡೆಗಣಿಸುತ್ತಾ ಬಂದಿದೆ ಎಂದು ಆರೋಪಿಸಿದ್ದಾರೆ. ಸಂಸತ್ತಿನ ಅಧಿವೇಶನದ ವೇಳೆ ಲಡಾಕ್ನಲ್ಲಿ ಚೀನಾದ ಅತಿಕ್ರಮಣ ನೀತಿ, ಮಣಿಪುರ ಹಿಂಸಾಚಾರ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸಿದರೆ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಲಡಾಕ್ನ್ನು ಆಕ್ರಮಿಸುವ ಚೀನಾದ ನೀತಿಯ ಕುರಿತು ಪ್ರಧಾನಿ ಮೋದಿಯವರು ಚರ್ಚಿಸಲಿದ್ದಾರೆ ಎಂಬುದನ್ನು ನಾವು ಕೇಳಿದ್ದೇವೆ. ಚೀನಾವು ತನ್ನ ಜಾಗವೆಂದು ಹೇಳಿಕೊಂಡು ನಕ್ಷೆಯಲ್ಲಿ ಅರುಣಾಚಲ ಹಾಗೂ ಲಡಾಕ್ ಜಾಗವನ್ನು ಪ್ರದರ್ಶಿಸಿರುವ ಬಗ್ಗೆ ಮೋದಿ ಚರ್ಚಿಸುವುದಾದರೆ ನಾವು ಸ್ವಾಗತಿಸುತ್ತೇವೆ. ನಮ್ಮ ದೇಶದ ಭೂಮಿಯೊಳಗೆ ಒಳನುಸುಳುವ ಚೀನಾದ ಬಂಡುಕೋರತನ ಹಾಗೂ ಮಣಿಪುರ ಹಿಂಸಾಚಾರದ ಬಗ್ಗೆ ಶೀಘ್ರವೇ ಸಂಸತ್ತಿನ ಅಧಿವೇಶನ ಕರೆಯುವ ಅಗತ್ಯವಿದೆ. ಹಾಗಾದರೆ ಮಾತ್ರ ಚರ್ಚೆ ನಡೆಯಲಿದೆ. ಒಂದು ವೇಳೆ ಮೋದಿ ಈ ವಿಚಾರದ ಕುರಿತು ಚರ್ಚಿಸಿದರೆ ನಾನು ಅವರಿಗೆ ಧನ್ಯವಾದಗಳನ್ನು ಸಲ್ಲಿಸಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಸೆಪ್ಟೆಂಬರ್ 18 ರಿಂದ 22ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ : ಸೆಪ್ಟೆಂಬರ್ 18 ರಿಂದ 22 ರ ವರೆಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ ಎಂದು (ಆಗಸ್ಟ್ 31-2023) ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಈ ಅಧಿವೇಶನದಲ್ಲಿ 5 ಕಲಾಪಗಳು ನಡೆಯಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಪೋಸ್ಟ್ ಮಾಡಿದ್ದರು. "ಅಮೃತ್ ಕಾಲ್ ನಡುವೆ, ಸಂಸತ್ತಿನಲ್ಲಿ ಫಲಪ್ರದ ಚರ್ಚೆಯನ್ನು ನಡೆಸಲು ಎದುರು ನೋಡುತ್ತಿದ್ದೇನೆ" ಎಂದು ಜೋಶಿ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ಸೆಪ್ಟೆಂಬರ್ 18ರಿಂದ 22ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ