ಮುಂಬೈ: ದೆಹಲಿಯ ಬೆಂಬಲವಿಲ್ಲದೇ ಮಹಾರಾಷ್ಟ್ರ ಜನರು ಮತ್ತು ಮಹಾರಾಷ್ಟ್ರ ವಾಹನಗಳ ಮೇಲೆ ಬೆಳಗಾವಿಯಲ್ಲಿ ದಾಳಿ ಮಾಡಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಮರಾಠಿ ಏಕೀಕರಣ ಸಮಿತಿ(ಎಂಇಎಸ್) ಸದಸ್ಯರನ್ನು ಬಂಧಿಸಲೂ ಸಾಧ್ಯವಾಗುವುದಿಲ್ಲ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ದೂರಿದರು. ಮರಾಠಿ ಅಭಿಮಾನವನ್ನು ಶಾಶ್ವತವಾಗಿ ಕೊನೆಗಾಣಿಸುವ ಆಟ ಶುರುವಾಗಿದೆ. ಬೆಳಗಾವಿ ದಾಳಿಯೂ ಅದೇ ಸಂಚಿನ ಭಾಗ ಎಂದು ದೂರಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಥೆ ಅವರನ್ನು ಟೀಕಿಸಿದ ರಾವತ್, ಇಂತಹ ದಾಳಿಗೆ ಪ್ರತ್ಯುತ್ತರ ನೀಡಲು ಶಿಂಧೆ ಸರ್ಕಾರ ಕೂಡ ದುರ್ಬಲವಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿರುವುದು ಕಾಣುತ್ತಿಲ್ಲವೇ? ಕೇಂದ್ರ ಸರ್ಕಾರ ತನ್ನನ್ನು ದೊಡ್ಡಪ್ಪ ಎಂದು ಪರಿಗಣಿಸಿಕೊಂಡಿದ್ದರೆ, ಇದನ್ನು ಯಾಕೆ ಬಗೆಹರಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಮಂಗಳವಾರ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಬೆಳಗಾವಿ ಪ್ರವೇಶಕ್ಕೆ ಕರ್ನಾಟಕ ಅನುಮತಿ ನೀಡಿಲ್ಲ. ಪೊಲೀಸರ ಸಲಹೆಯಂತೆ ದಕ್ಷಿಣ ಪ್ರಾಂತ್ಯದ ಮಹಾರಾಷ್ಟ್ರ ರಸ್ತೆ ಸಾರಿಗೆ ಸೇವೆಯನ್ನು ಕೂಡ ಬಂದ್ ಮಾಡಲಾಗಿದೆ. ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಬುರಾಜ್ ದೇಸಾಯಿ ಬೆಳಗಾವಿ ಗಡಿ ಪ್ರವೇಶ ಮಾಡದ ಹಿನ್ನೆಲೆಯಲ್ಲಿ ಅವರನ್ನು ಹೇಡಿಗಳು ಎಂದಿದ್ದಾರೆ.
ರಾಜ್ಯದ ಏಕತೆಗೆ ಧಕ್ಕೆ ತರುತ್ತಿರುವ ಪ್ರಯತ್ನ ನಡೆಯುತ್ತಿದೆ. ರಾಜ್ಯಕ್ಕಾಗಿ ಪ್ರಾಣ ಕೂಡಾ ನೀಡಲು ಸಿದ್ದ. ರಾಜ್ಯಕ್ಕಾಗಿ ಅನೇಕರು ಈಗಾಗಲೇ ತ್ಯಾಗ ಮಾಡಿದ್ದಾರೆ. ಈಗ ಅದರ ಅಸ್ಮಿತೆಗೆ ಧಕ್ಕೆ ಆಗುತ್ತಿರುವುದನ್ನು ನೋಡಲು ಸಾಧ್ಯವಿಲ್ಲ ಎಂದು ರಾವತ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಗಡಿ ಸಮಸ್ಯೆ: ಸರ್ವಪಕ್ಷ ಸಭೆ ಕರೆಯುವ ಪರಿಸ್ಥಿತಿ ಬಂದಿಲ್ಲ.. ಸಿದ್ದರಾಮಯ್ಯಗೆ ಸಚಿವ ಕಾರಜೋಳ ಟಾಂಗ್