ಸರೈಕೆಲಾ(ಜಾರ್ಖಂಡ್): ಹೆಣ್ಣು ಅಬಲೆ ಅಲ್ಲ ಸಬಲೆ ಎನ್ನುವುದನ್ನು ಮಹಿಳೆಯರು ತಮ್ಮ ಸಾಧನೆಗಳ ಮೂಲಕ ಮತ್ತೆ ಮತ್ತೆ ಸಮಾಜಕ್ಕೆ ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶದಲ್ಲಂತೂ ಮೂಲೆ ಗುಂಪಾಗಿದ್ದ ಸ್ತ್ರೀ ಪ್ರತಿ ಕ್ಷೇತ್ರದಲ್ಲೂ ಮಿಂಚುತ್ತಿದ್ದಾಳೆ. ಹೌದು ಮಹಿಳೆಯರು ಕ್ರೀಡೆಯಿಂದ ಬೆಳ್ಳಿತೆರೆಗೆ, ಫ್ಯಾಷನ್ ಲೋಕದಿಂದ ರ್ಯಾಂಪ್ವರೆಗೆ ಯಶಸ್ಸಿನ ಪತಾಕೆ ಹಾರಿಸುತ್ತಿದ್ದಾರೆ. ಇದೀಗ ಜಾರ್ಖಂಡ್‌ನ ಸಾಗರಿಕಾ ಪಾಂಡಾ ತಮ್ಮ ಕೌಶಲ್ಯದಿಂದ ಪೀಪಲ್ಸ್ ಚಾಯ್ಸ್ ವಿಭಾಗದಲ್ಲಿ ಮಿಸೆಸ್ ಇಂಡಿಯಾ 2023 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಜಮ್ಶೆಡ್‌ಪುರ ನಿವಾಸಿ ಸಾಗರಿಕಾ ಪಾಂಡಾ ಓರ್ವ ಉದ್ಯಮಿ. ಮಹಿಳೆ ಬಯಸಿದರೆ, ಎಂಥಹದೇ ಪರಿಸ್ಥಿಯಲ್ಲಿಯೂ ತನ್ನ ಯಶಸ್ಸನ್ನು ಸಾಧಿಸುತ್ತಾಳೆ ಎಂಬುದಕ್ಕೆ ಸಾಗರಿಕಾ ಮತ್ತೊಂದು ಉದಾಹರಣೆಯಾಗಿದ್ದಾರೆ. ಮಿಸೆಸ್ ಇಂಡಿಯಾ 2023 ರ ಪೀಪಲ್ಸ್ ಚಾಯ್ಸ್ ವಿಭಾಗದ ಟೈಟಲ್ನ್ನು ಇವರು ಪಡೆದುಕೊಂಡಿದ್ದು ತನ್ನ ರಾಜ್ಯಕ್ಕೆ ಮತ್ತು ತಮ್ಮ ಕುಟುಂಬಕ್ಕೆ ಹೆಸರು ತಂದಿದ್ದಾರೆ. ಝೀಲ್ ಎಂಟರ್‌ಟೈನ್‌ಮೆಂಟ್ ಮತ್ತು ಬ್ಲೂಮಿಂಗ್ ಐಕಾನ್ಸ್ ಅಕಾಡೆಮಿ ಮಿಸ್, ಮಿಸೆಸ್ ಮತ್ತು ಮಿಸ್ಟರ್ 2023 ಸ್ಪರ್ಧೆಯನ್ನು ಛತ್ತೀಸ್‌ಗಢದ ಭಿಲಾಯ್‌ನಲ್ಲಿ ಏಪ್ರಿಲ್ 4 ಮತ್ತು 5 ರಂದು ಆಯೋಜಿಸಿತ್ತು. ಇದರಲ್ಲಿ ಸಾಗರಿಕಾ ಪಾಂಡಾ ಮಿಸೆಸ್ ಇಂಡಿಯಾ ಪೀಪಲ್ಸ್ ಚಾಯ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿಗ್ದಾರೆ.
ಇದನ್ನೂ ಓದಿ: ಕತ್ತೆ ಸಾಕಣೆ ಮಾಡಿ ಯಶಸ್ವಿಯಾದ ವ್ಯಾಪಾರಿ; ಇವರ ತಿಂಗಳ ಆದಾಯ ಕೇಳಿದರೆ ನೀವು ಅಚ್ಚರಿ ಪಡೋದು ಗ್ಯಾರಂಟಿ
ಅದಿತಿ ಗೋವಿತ್ರಿಕರ್ರಿಂದ ಕಿರೀಟ ಧಾರಣೆ: ಈ ಸೌಂದರ್ಯ ಸ್ಪರ್ಧೆಗೆ ದೇಶಾದ್ಯಂತ 15 ರಾಜ್ಯಗಳಿಂದ 52 ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಗೆ ಅತಿಥಿಯಾಗಿ ಆಗಮಿಸಿದ್ದ 2001 ಮಿಸೆಸ್ ವರ್ಲ್ಡ್ ಅದಿತಿ ಗೋವಿತ್ರಿಕರ್ ಸಾಗರಿಕಾ ಪಾಂಡಾ ಅವರಿಗೆ ಕಿರೀಟವನ್ನು ತೊಡಿಸಿ, ಪೀಪಲ್ಸ್ ಚಾಯ್ಸ್ ಪ್ರಶಸ್ತಿಯನ್ನು ನೀಡಿದರು. ತೀರ್ಪುಗಾರರಾಗಿ ಟಿವಿ ಧಾರಾವಾಹಿ ನಿರ್ಮಾಪಕ ಪ್ರದೀಪ್ ಪಾಲಿ ಅವರು ಉಪಸ್ಥಿತರಿದ್ದರು. ಪ್ರಶಸ್ತಿ ಗೆದ್ದ ನಂತರ ಸಂತಸ ವ್ಯಕ್ತಪಡಿಸಿರುವ ಸಾಗರಿಕಾ ಪಾಂಡಾ, ಪತಿ ಮನೋಜ್ ಕರ್ ಹಾಗೂ ಕುಟುಂಬ ಸದಸ್ಯರಿಗೆ ಈ ಗೌರವ ಸಲ್ಲಿಸಿದ್ದಾರೆ. ಸ್ಪರ್ಧೆ ಮುಗಿದ ನಂತರ ಜಾರ್ಖಂಡ್‌ಗೆ ಹಿಂದಿರುಗಿದ್ದ ನಂತರ ಸಾಗರಿಕಾ ಪಾಂಡಾ ಅವರನ್ನು ಸೆರೈಕೆಲಾದಲ್ಲಿ ಖಾಸಗಿ ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಉದ್ಯಮಿಯಾಗಿರುವ ಸಾಗರಿಕಾ ಪಾಂಡಾ: ಬ್ಯುಸಿನೆಸ್ ವುಮನ್ ಆಗಿರುವ ಇವರು ವೃತ್ತಿಪರ ಸಲೂನ್ ಅನ್ನು ನಡೆಸುತ್ತಿದ್ದಾರೆ. ಅಲ್ಲದೇ ಅಲ್ಲಿ ಅನೇಕ ಪುರುಷರು ಮತ್ತು ಮಹಿಳೆಯರಿಗೆ ಉದ್ಯೋಗವನ್ನು ನೀಡಿದ್ದಾರೆ. ಪ್ರತಿಯೊಬ್ಬ ಮಹಿಳೆಯು ನಿರ್ವಹಣಾ ಶಕ್ತಿ ಮತ್ತು ತನ್ನದೇ ಆದ ಕೌಶಲ್ಯವನ್ನು ಹೊಂದಿರುತ್ತಾಳೆ. ಆದರೆ ಅದನ್ನು ಹೊರತರಬೇಕು. ಸ್ತ್ರೀಯಲ್ಲಿ ಉತ್ಸಾಹ, ಛಲವಿದ್ದರೆ ಆಕೆ ಏನನ್ನಾದರೂ ಸಾಧಿಸಬಹುದೆಂಬುದು ಸಾಗರಿಕಾ ಅವರ ಮನದಾಳದ ಮಾತು.
ಇದನ್ನೂ ಓದಿ: ಸತತ 8 ಗಂಟೆಗಳ ಕಾಲ ಈಜು.. ಸ್ವಿಮ್ಮಿಂಗ್ನಲ್ಲಿ 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್'ಗೆ ಸೇರಿದ ಬಾಲಕಿ