ಗಯಾ (ಬಿಹಾರ): ಬಿಹಾರದಲ್ಲಿ ಮದ್ಯ ಸೇವನೆ ಮತ್ತು ಮಾರಾಟಕ್ಕೆ ಸಂಪೂರ್ಣವಾಗಿ ನಿಷೇಧ ಇದೆ. ಇದರ ನಡುವೆ ಬೋಧಗಯಾದ ಪ್ರಸಿದ್ಧ ಮಹಾಬೋಧಿ ದೇಗುಲದಲ್ಲಿ ರಷ್ಯಾದ ಬೌದ್ಧ ಸನ್ಯಾಸಿ 10 ಮಿಲಿ ಲೀಟರ್ ಮದ್ಯದೊಂದಿಗೆ ಸಿಕ್ಕಿ ಬಿದ್ದಿದ್ದಾರೆ. ಹೀಗಾಗಿ ಅವರನ್ನು ಪೊಲೀಸರು ಹಿಡಿದು ಜೈಲಿಗೆ ಕಳುಹಿಸಿದ್ದಾರೆ. ಬಂಧಿತ ರಷ್ಯಾದ ಬೌದ್ಧ ಸನ್ಯಾಸಿಯನ್ನು ಇಡಿಪ್ಸಿ ಅಯಾಸ್ ಎಂದು ಗುರುತಿಸಲಾಗಿದೆ.
ರಷ್ಯಾದ ಬೌದ್ಧ ಸನ್ಯಾಸಿಯಾದ ಇಡಿಪ್ಸಿ ಅಯಾಸ್ ಮಹಾಬೋಧಿ ದೇಗುಲ ಪ್ರವೇಶಿಸುವ ಸಂದರ್ಭದಲ್ಲಿ ಇಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದ್ದಾರೆ. ಆಗ ಇಡಿಪ್ಸಿ ಬಳಿ 10 ಮಿಲಿ ಲೀಟರ್ ಮದ್ಯ ಪತ್ತೆಯಾಗಿದೆ. ಆದ್ದರಿಂದ ವಿದೇಶಿ ಸನ್ಯಾಸಿಯನ್ನು ತಡೆದು ಭದ್ರತಾ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೇ, ಇಡಿಪ್ಸಿ ಅಯಾಸ್ ವಿರುದ್ಧ ಪೊಲೀಸರು ಎಫ್‌ಐಆರ್ ಸಹ ದಾಖಲಿಸಿದ್ದಾರೆ.
ಎಷ್ಟೇ ಮದ್ಯ ಹೊಂದಿದ್ದರೂ ಅದು ಅಪರಾಧ: ಬಿಹಾರದಲ್ಲಿ ಮದ್ಯ ಸೇವನೆ ಹಾಗೂ ಮಾರಾಟಕ್ಕೆ ನಿಷೇಧ ಇರುವುದರಿಂದ ಎಷ್ಟೇ ಮದ್ಯ ಹೊಂದಿದ್ದರೂ ಅದು ಅಪರಾಧವಾಗಿದೆ. ಹೀಗಾಗಿ 10 ಮಿಲಿ ಲೀಟರ್ ಮದ್ಯದೊಂದಿಗೆ ಸಿಕ್ಕಿ ಬಿದ್ದ ಬೌದ್ಧ ಸನ್ಯಾಸಿ ಇಡಿಪ್ಸಿ ಅಯಾಸ್ ಅವರನ್ನು ಬಂಧಿಸಲಾಗಿದೆ. ಮದ್ಯವನ್ನು ಇಟ್ಟುಕೊಂಡು ಅವರು ಮಹಾಬೋಧಿ ದೇವಸ್ಥಾನಕ್ಕೆ ಪ್ರವೇಶಿಸುವಾಗ ವಶಕ್ಕೆ ಪಡೆದು, ಜೈಲಿಗೆ ಕಳುಹಿಸಲಾಗಿದೆ ಎಂದು ಬೋಧಗಯಾ ಪೊಲೀಸ್ ಅಧಿಕಾರಿ ರೂಪೇಶ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.
ತಂತ್ರ ಸಾಧನಕ್ಕಾಗಿ ಮದ್ಯ ಹೊಂದಿದ್ದ ಸನ್ಯಾಸಿ?: ತಂತ್ರ ಸಾಧನಕ್ಕಾಗಿ ಕೇವಲ 10 ಮಿಲಿ ಲೀಟರ್ ಮದ್ಯವನ್ನು ಇಟ್ಟುಕೊಂಡು ಇಡಿಪ್ಸಿ ಅಯಾಸ್ ಮಹಾಬೋಧಿ ದೇಗುಲದ ಒಳಗೆ ಪ್ರವೇಶಿಸುತ್ತಿದ್ದರು. ಇದನ್ನು ಬಹುಶಃ ತಾರಾ ದೇವಿಯ ವಿಶೇಷ ಪೂಜೆಯಲ್ಲಿ ಬಳಸುವ ಉದ್ದೇಶ ಹೊಂದಿದ್ದರು ಎಂದೂ ಹೇಳಲಾಗುತ್ತಿದೆ. ಆದರೆ, ಬಿಹಾರದಲ್ಲಿ ಮದ್ಯಕ್ಕೆ ಯಾವುದೇ ಅಸ್ಪದ ಇಲ್ಲದೇ ಇರುವ ಕಾರಣ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ಮದ್ಯ ಮಾರಾಟ ನಿಷೇಧವಿದ್ದರೂ, ನಿಲ್ಲದ ನಕಲಿ ಮದ್ಯದ ಹಾವಳಿ: ಬಿಹಾರದಲ್ಲಿ ಮದ್ಯ ಸೇವನೆ ಮತ್ತು ಮಾರಾಟದ ಸಂಪೂರ್ಣ ನಿಷೇಧದ ನಡುವೆಯೂ ನಕಲಿ ಮದ್ಯದ ಹಾವಳಿಗೆ ಮಾತ್ರ ಕಡಿವಾಣ ಬಿದ್ದಿಲ್ಲ. ಕಳೆದ ಎರಡು ದಿನಗಳಿಂದ ನಕಲಿ ಮದ್ಯ ಸೇವನೆಯಿಂದಲೇ ಅಂದಾಜು 80ಕ್ಕೂ ಜನರು ಮೃತಪಟ್ಟಿರುವುದು ವರದಿಯಾಗಿದೆ. ಅದರಲ್ಲೂ, ಸರನ್, ಛಪ್ರಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅವ್ಯಾಹತವಾಗಿ ಮದ್ಯ ಮಾರಾಟವಾಗುತ್ತಿದೆ. ನಕಲಿ ಮದ್ಯ ಸೇವಿಸಿದವರು ದೃಷ್ಟಿ ಮಂದ ಮತ್ತು ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.
ಮತ್ತೊಂದಡೆ, ಬಿಹಾರ ಪೊಲೀಸರು ನಕಲಿ ಮದ್ಯಕ್ಕೆ ಕಡಿವಾಣ ಹಾಕಲು ಶ್ರಮಿಸುತ್ತಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ 200ಕ್ಕೂ ಹೆಚ್ಚು ಜನ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಇದರ ಜೊತೆಗೆ ನಕಲಿ ಮದ್ಯ ಸೇವಿಸಿ ಮೃತಪಟ್ಟವರಿಗೆ ಯಾವುದೇ ಪರಿಹಾರ ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಈಗಾಗಲೇ ಘೋಷಿಸಿದ್ದಾರೆ.
ಇದನ್ನೂ ಓದಿ: ಹೊಸ ವರ್ಷದ ಪಾರ್ಟಿಯಲ್ಲಿ ನಕಲಿ ಮದ್ಯ ಸೇವನೆ.. ಮಂದ ದೃಷ್ಟಿ, ಹೊಟ್ಟೆ ನೋವಿನಿಂದ ಇಬ್ಬರ ಸಾವು