ನವದೆಹಲಿ: ಲಘು ಮೋಟಾರು ವಾಹನ ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿ ಆ ಪರವಾನಾಗಿ ಬಲದ ಮೇಲೆ 7,500 ಕೆಜಿ ಹೊರೆಯ ಸಾರಿಗೆ ವಾಹನಗಳನ್ನು ಚಲಾಯಿಸಲು ಕಾನೂನುಬದ್ಧವಾಗಿ ಅರ್ಹನೇ ಇದಕ್ಕೆ ಕಾನೂನಿನಲ್ಲಿ ಬದಲಾವಣೆ ಅಗತ್ಯವಿದೆಯೇ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು, ರಸ್ತೆ ಸುರಕ್ಷತೆ ಮತ್ತು ಸಾರ್ವಜನಿಕ ಸಾರಿಗೆಯ ಇತರ ಬಳಕೆದಾರರ ಸುರಕ್ಷತೆಯ ಕಾಳಜಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂಬ ಕಾನೂನಿನ ವ್ಯಾಖ್ಯಾನ ಗಮನಿಸಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಈ ವಿಷಯವನ್ನು ಹೊಸದಾಗಿ ನೋಡಬೇಕು ಎಂದು ನ್ಯಾಯಾಲಯ ಹೇಳಿತು.
ಎರಡು ತಿಂಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಿ ನಿರ್ಧಾರವನ್ನು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ರಸ್ತೆ ಸುರಕ್ಷತೆ ಮತ್ತು ಸಾರ್ವಜನಿಕ ಸುರಕ್ಷತೆ ಬಗ್ಗೆ ಕಾನೂನು ಬದ್ಧ ಕಾಳಜಿಯನ್ನು ಕೇಂದ್ರ ತೆಗೆದುಕೊಳ್ಳಬೇಕು ಎಂದೂ ಹೇಳಿದೆ. ಕಾನೂನಿನಲ್ಲಿ ಬದಲಾವಣೆಯ ಅಗತ್ಯವಿದ್ದಲ್ಲಿ ಮುಂದಿನ ಮಾರ್ಗವನ್ನು ಪರಿಗಣಿಸಬೇಕು ಎಂದು ತಿಳಿಸಿದೆ.
ಮೋಟಾರು ವಾಹನ ಕಾಯ್ದೆಯ ವಿವಿಧ ನಿಬಂಧನೆಗಳ ಪ್ರಕಾರ ಎರಡು ವರ್ಗಗಳ ಅಡಿ ಪರವಾನಗಿ ಪಡೆಯಲು ಅರ್ಹತೆಯ ವಿಷಯದಲ್ಲಿ ಕೆಲವು ವ್ಯತ್ಯಾಸಗಳಿರುವುದರಿಂದ ಪ್ರಶ್ನೆಯನ್ನು ಸಂವಿಧಾನ ಪೀಠಕ್ಕೆ ಉಲ್ಲೇಖಿಸಲಾಗಿದೆ. ಈ ಸಂಬಂಧ 76 ಅರ್ಜಿಗಳ ವಿಚಾರಣೆಯನ್ನು ಸಂವಿಧಾನ ಪೀಠ ನಡೆಸುತ್ತಿದೆ. ಮುಕುಂದ್ ದೇವಾಂಗನ್ ವರ್ಸಸ್ ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಪ್ರಕರಣದಲ್ಲಿ 2017ರ ಸುಪ್ರೀಂ ಕೋರ್ಟ್ ತೀರ್ಪನ್ನು ಕೇಂದ್ರ ಸರ್ಕಾರ ಅಂಗೀಕರಿಸಿರುವುದರಿಂದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಭಿಪ್ರಾಯಗಳನ್ನು ಆಲಿಸಬೇಕಾಗುತ್ತದೆ ಎಂದು ಈ ವರ್ಷದ ಜುಲೈನಲ್ಲಿ ತಿಳಿಸಲಾಗಿತ್ತು.
ಮುಕುಂದ್ ದೇವಾಂಗನ್ ಪ್ರಕರಣದಲ್ಲಿ, ಲಘು ಮೋಟಾರು ವಾಹನ ಚಾಲನ ಪರವಾನಗಿ ಹೊಂದಿರುವ ವ್ಯಕ್ತಿ ನಿರ್ದಿಷ್ಟ ತೂಕದ ಸಾರಿಗೆ ವಾಹನವನ್ನು ಕಾನೂನುಬದ್ಧವಾಗಿ ಚಲಾಯಿಸಲು ಅರ್ಹರೇ ಎಂಬ ಕಾನೂನು ಪ್ರಶ್ನೆ ಎದುರಿಸಲು ಸುಪ್ರೀಂ ಕೋರ್ಟ್ ಈ ಹಿಂದೆ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರ ಸಹಾಯವನ್ನು ಕೋರಿತ್ತು. ದೇವಾಂಗನ್ ತೀರ್ಪು ತಪ್ಪಾಗಿದೆ ಎಂದು ಕೇಂದ್ರ ಭಾವಿಸಿದರೆ, ಅದನ್ನು ತಿದ್ದುಪಡಿ ಮಾಡಬಹುದಾಗಿದೆ. ಸಾಮಾಜಿಕ ನೀತಿಯ ಸಮಸ್ಯೆಗಳನ್ನು ಸಂವಿಧಾನ ಪೀಠದಲ್ಲಿ ನಿರ್ಧರಿಸಲು ಸಾಧ್ಯವಿಲ್ಲ. ಈ ಸಮಸ್ಯೆಗಳನ್ನು ನ್ಯಾಯಾಲಯದಲ್ಲಿ ನಿರ್ಧರಿಸುವುದಕ್ಕಿಂತ ನೀತಿಯ ಮಟ್ಟದಲ್ಲಿ ಸರ್ಕಾರವು ವಿಂಗಡಿಸುವುದು ಉತ್ತಮ ಎಂದು ನ್ಯಾಯ ಪೀಠ ಹೇಳಿದೆ.
ಇದನ್ನೂ ಓದಿ: ವೈಯಕ್ತಿಕ ಖಾತೆಗಳ ನಿರ್ಬಂಧ: ಹೈಕೋರ್ಟ್ನಲ್ಲಿ 25 ಲಕ್ಷ ರೂ. ಠೇವಣಿ ಇಟ್ಟ ಎಕ್ಸ್ ಕಾರ್ಪ್