ನವದೆಹಲಿ: ಆಟೋ, ಟ್ಯಾಕ್ಸಿ ಮತ್ತು ಮಿನಿ ಬಸ್ ಚಾಲಕರ ವಿವಿಧ ಸಂಘಟನೆಗಳು ಸೋಮವಾರ 2 ದಿನಗಳ ಮುಷ್ಕರ ಆರಂಭಿಸಿರುವುದರಿಂದ ದೆಹಲಿಯಲ್ಲಿ ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಪ್ರಯಾಣ ದರ ಏರಿಕೆ ಮತ್ತು ಸಿಎನ್‌ಜಿ ಬೆಲೆ ಇಳಿಕೆಗೆ ಒಕ್ಕೂಟಗಳು ಒತ್ತಾಯಿಸಿವೆ.
ಕೆಲ ಯೂನಿಯನ್‌ಗಳು ಒಂದು ದಿನದ ಮುಷ್ಕರ ನಡೆಸುವುದಾಗಿ ಹೇಳಿದ್ರೆ, ಕ್ಯಾಬ್ ಅಗ್ರಿಗೇಟರ್‌ಗಳಿಗೆ ಚಾಲನೆ ಮಾಡುವ ಸದಸ್ಯರನ್ನು ಹೊಂದಿರುವ ಸರ್ವೋದಯ ಡ್ರೈವರ್ ಅಸೋಸಿಯೇಷನ್ ದೆಹಲಿ ಸಂಘ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದೆ ಎಂದು ಹೇಳಿದೆ. ಕಾಲಮಿತಿಯಲ್ಲಿ ಪ್ರಯಾಣ ದರ ಪರಿಷ್ಕರಣೆ ಪರಿಗಣಿಸಲು ಸಮಿತಿಯನ್ನು ರಚಿಸುವಂತೆ ದೆಹಲಿ ಸರ್ಕಾರ ಘೋಷಣೆ ಮಾಡಿದೆ. ಆದ್ರೆ ತಮ್ಮ ಮುಷ್ಕರವನ್ನು ಹಿಂಪಡೆಯಲು ಕಾರ್ಮಿಕ ಸಂಘಟನೆಗಳು ಹಿಂದೇಟು ಹಾಕಿವೆ. ಇಂಧನ ಬೆಲೆ ಇಳಿಕೆ ಮತ್ತು ಪ್ರಯಾಣ ದರಗಳ ಏರಿಕೆಯಲ್ಲಿ ಸರ್ಕಾರ ನಮಗೆ ಸಹಾಯ ಮಾಡಲು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ನಾವು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದೇವೆ ಎಂದು ದೆಹಲಿಯ ಸರ್ವೋದಯ ಚಾಲಕ ಸಂಘದ ಅಧ್ಯಕ್ಷ ಕಮಲಜೀತ್ ಗಿಲ್ ತಿಳಿಸಿದ್ದಾರೆ.
ಓದಿ: ದೇವಾಲಯಗಳ ನಗರದಲ್ಲಿ ಚಾಲಕರ ಪ್ರವಾಹ.. ವಿವಿಧ ಬೇಡಿಕೆ ಈಡೇರಿಸುವಂತೆ ರಸ್ತೆಗಿಳಿದ 3 ಲಕ್ಷ ಡ್ರೈವರ್ಸ್!
ದೆಹಲಿ ಆಟೋ ರಿಕ್ಷಾ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸೋನಿ ಮಾತನಾಡಿ, ಸಿಎನ್‌ಜಿ ದರಗಳಲ್ಲಿ ಅತೀ ಹೆಚ್ಚಳದಿಂದ ಆಟೋ ಮತ್ತು ಕ್ಯಾಬ್ ಚಾಲಕರ ಮೇಲೆ ಗಂಭೀರ ಪರಿಣಾಮ ಬಿರಿದೆ ಎಂದು ಹೇಳಿದರು. ದೆಹಲಿ ಸರ್ಕಾರ ಕೆಲವು ಸಮಿತಿಗಳನ್ನು ರಚಿಸುತ್ತಿದೆ ಎಂದು ನಮಗೆ ತಿಳಿದಿದೆ. ಆದರೆ ಕಣ್ಣಿಗೆ ಕಾಣದ ನಮ್ಮ ಸಮಸ್ಯೆಗಳಿಗೆ ನಮಗೆ ಪರಿಹಾರಗಳು ಬೇಕಾಗುತ್ತವೆ. ಸರ್ಕಾರ (ಕೇಂದ್ರ ಮತ್ತು ದೆಹಲಿ) ಸಿಎನ್‌ಜಿ ಬೆಲೆಯಲ್ಲಿ ಪ್ರತಿ ಕೆಜಿಗೆ 35 ರೂ. ಸಬ್ಸಿಡಿ ನೀಡಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ ಎಂದು ಅವರು ಹೇಳಿದರು.
ನಗರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಪೂರಕವಾಗಿ 90,000 ಆಟೋಗಳು ಮತ್ತು 80,000 ಕ್ಕೂ ಹೆಚ್ಚು ನೋಂದಾಯಿತ ಟ್ಯಾಕ್ಸಿಗಳಿವೆ. ಸಿಎನ್‌ಜಿ ಬೆಲೆಗಳು ಹೆಚ್ಚಾಗುತ್ತಿರುವುದರಿಂದ ನಾವು ಪ್ರತಿದಿನ ನಮ್ಮ ಆಟೋಗಳು ಮತ್ತು ಕ್ಯಾಬ್‌ಗಳಿಂದ ನಷ್ಟ ಹೊಂದಲು ಸಾಧ್ಯವಿಲ್ಲ. ಇದು ಬೆಲೆ ಏರಿಕೆಯನ್ನು ವಿರೋಧಿಸಲು ಸಾಂಕೇತಿಕ ಪ್ರತಿಭಟನೆಯಾಗಿದೆ ಎಂದು ಚಾಲಕರೊಬ್ಬರು ಹೇಳಿದರು.
ಎಸ್‌ಟಿಎ ಆಪರೇಟರ್‌ಗಳ ಏಕತಾ ಮಂಚ್‌ನ ಪ್ರಧಾನ ಕಾರ್ಯದರ್ಶಿ ಶ್ಯಾಮಲಾಲ್ ಗೋಲಾ ಮಾತನಾಡಿ, ಸುಮಾರು 10,000 ಸಂಖ್ಯೆಯ ಆರ್‌ಟಿವಿ ಬಸ್‌ಗಳು ಸಹ ಪ್ರಯಾಣ ದರಗಳನ್ನು ಪರಿಷ್ಕರಿಸುವ ಮತ್ತು ಸಿಎನ್‌ಜಿ ಬೆಲೆಗಳನ್ನು ಇಳಿಸುವ ಬೇಡಿಕೆಗಳಿಗೆ ಬೆಂಬಲವಾಗಿ ನಿಂತಿದ್ದಾವೆ ಎಂದು ಹೇಳಿದರು.