ರೇವಾ(ಮಧ್ಯಪ್ರದೇಶ): ಅಪ್ರಾಪ್ತೆ ಅತ್ಯಾಚಾರ ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳು ಅಕ್ರಮವಾಗಿ ಕಟ್ಟಿದ್ದ ಮನೆಗಳನ್ನು ಜಿಲ್ಲಾಡಳಿತ ಕೆಡವಿ ಹಾಕಿರುವ ಘಟನೆ ಮಧ್ಯಪ್ರದೇಶದ ರೇವಾ ಎಂಬಲ್ಲಿ ನಡೆದಿದೆ. ಇದರ ಬೆನ್ನಲ್ಲೇ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕುವ ಕಾರ್ಯವೂ ನಡೆಯುತ್ತಿದೆ.
ಏನಿದು ಪ್ರಕರಣ?: ರೇವಾ ಜಿಲ್ಲೆಯಲ್ಲಿರುವ ದೇವಸ್ಥಾನವೊಂದಕ್ಕೆ 17 ವರ್ಷದ ಅಪ್ರಾಪ್ತೆ ತನ್ನ ಸ್ನೇಹಿತನೊಂದಿಗೆ ಬಂದಿದ್ದಳು. ಈ ಸಂದರ್ಭದಲ್ಲಿ ಆರು ಮಂದಿ ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಜೊತೆಗೆ ಎರಡು ದಿನಗಳ ಕಾಲ ಬಾಲಕಿ ಹಾಗೂ ಆತನ ಸ್ನೇಹಿತನನ್ನು ಒತ್ತೆಯಾಳಾಗಿಟ್ಟುಕೊಂಡಿದ್ದರು. ಇದಾದ ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಹೊರಬಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳ ಪೈಕಿ ಮೂವರ ಬಂಧನ ಮಾಡಿದ್ದು, ಉಳಿದವರಿಗೋಸ್ಕರ ಶೋಧ ನಡೆಸುತ್ತಿದ್ದಾರೆ. ಘಟನೆಯಲ್ಲಿ ಕೆಲವರು ಅಪ್ರಾಪ್ತರಿರುವುದಾಗಿ ತಿಳಿದು ಬಂದಿದೆ. ಬಂಧಿತರನ್ನು ಶಿವ ಯಾದವ್, ಕಿಶನ್ ದಹ್ಲಿಯಾ ಮತ್ತು ವಿದ್ಯಾಸಾಗರ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ವಿಶೇಷ ಚೇತನ ಬಾಲಕಿ ಮೇಲೆ ಅತ್ಯಾಚಾರ: ಮೂವರು ಆರೋಪಿಗಳ ಬಂಧನ
ಬುಲ್ಡೋಜರ್ ಮೂಲಕ ಮನೆ ಕೆಡವಿದ ಜಿಲ್ಲಾಡಳಿತ: ಅತ್ಯಾಚಾರ ಆರೋಪದಲ್ಲಿ ಭಾಗಿಯಾಗಿರುವ ಕಾಮುಕರ ಮನೆಗಳ ಮೇಲೆ ರೇವಾ ಜಿಲ್ಲಾಡಳಿತ ಬುಲ್ಡೋಜರ್ ಹರಿಸಿ ನೆಲಸಮಗೊಳಿಸಿದೆ. ಇನ್ನುಳಿದ ಮೂವರು ಆರೋಪಿಗಳ ಮನೆಗಳ ಮೇಲೂ ಇಂದು ದಾಳಿ ನಡೆಸುವ ಸಾಧ್ಯತೆ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರೇವಾ ಎಎಸ್ಎಫ್ ಅನಿಲ್ ಸೋಂಕಾರ್, "ಪ್ರಕರಣದಲ್ಲಿ ಆರು ಆರೋಪಿಗಳು ಭಾಗಿಯಾಗಿದ್ದು, ಈಗಾಗಲೇ ಮೂವರ ಬಂಧನ ಮಾಡಲಾಗಿದೆ. ಉಳಿದವರಿಗೋಸ್ಕರ ಶೋಧಕಾರ್ಯ ಮುಂದುವರೆದಿದೆ. ಆದಷ್ಟು ಬೇಗ ಬಂಧನ ಮಾಡಲಾಗುವುದು" ಎಂದರು.