ಸಿರ್ಸಾ(ಹರಿಯಾಣ): ಕಟ್ಟಿಕೊಂಡ ಹೆಂಡತಿಯನ್ನ ಕೊಲೆ ಮಾಡಿರುವ ನಿವೃತ್ತ ಯೋಧನೊಬ್ಬ ತದನಂತರ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಹರಿಯಾಣದ ಸಿರ್ಸಾದಲ್ಲಿ ಈ ಪ್ರಕರಣ ನಡೆದಿದ್ದು, ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ಮೃತದೇಹ ವಶಕ್ಕೆ ಪಡೆದುಕೊಂಡಿದ್ದಾರೆ.
ಸಿರ್ಸಾ ಜಿಲ್ಲೆಯ ಬರಗೂಢದ ನಿವಾಸಿ ನಿವೃತ್ತ ಯೋಧ ಗುರ್ಮೆಲ್ ಸಿಂಗ್ ತನ್ನ ಹೆಂಡತಿಯನ್ನ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಇದಾದ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಆಗಮಿಸಿದ್ದು, ನನ್ನ ಪತ್ನಿಯನ್ನ ಕೊಲೆ ಮಾಡಿದ್ದೇನೆಂದು ಹೇಳಿಕೊಂಡಿದ್ದಾನೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುವುದಾಗಿ ಪ್ರಭಾರಿ ಪೊಲೀಸ್ ವರಿಷ್ಠಾಧಿಕಾರಿ ಜೈ ಭಗವಾನ್ ತಿಳಿಸಿದ್ದಾರೆ.
ಇದನ್ನೂ ಓದಿ: ತಂದೆ ಮದ್ಯಪಾನ ವ್ಯಸನಿ; 'ಅಧ್ಯಯನಕ್ಕಾಗಿ ಸಹಾಯ ಮಾಡಿ'.. ಸಿಎಂ ಎದುರು ವಿದ್ಯಾರ್ಥಿಯ ಮನವಿ
ಯಾವ ಕಾರಣಕ್ಕಾಗಿ ಕೊಲೆ?: ಬೇರೆ ವ್ಯಕ್ತಿ ಜೊತೆ ಅಕ್ರಮ ಸಂಬಂಧವಿದೆ ಎಂಬ ಶಂಕೆಯಿಂದ ಗುರ್ಮೆಲ್ ಸಿಂಗ್ ಹೆಂಡತಿಯನ್ನ ಕೊಲೆ ಮಾಡಿದ್ದಾನೆ. ಘಟನೆ ಬೆನ್ನಲ್ಲೇ ಬರಗೂಢ ಪೊಲೀಸ್ ಠಾಣೆ ಮುಂದೆ ಜಮಾವಣೆಗೊಂಡಿರುವ ಮಹಿಳೆ ಸಂಬಂಧಿಕರು ಕೆಲಹೊತ್ತು ಪ್ರತಿಭಟನೆ ನಡೆಸಿದ್ದಾರೆ. ಬರಗೂಢ ಗ್ರಾಮದ ನಿವಾಸಿ ಗುರ್ಮೆಲ್ ಸಿಂಗ್ ಮೊದಲ ಪತ್ನಿ ಈಗಾಗಲೇ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಆತ ಎರಡನೇ ಮದುವೆ ಮಾಡಿಕೊಂಡಿದ್ದನು. ಗಂಡ - ಹೆಂಡತಿ ನಡುವೆ ಮೇಲಿಂದ ಮೇಲೆ ಜಗಳ ನಡೆಯುತ್ತಲೇ ಇತ್ತು. ಇಂದು ಬೆಳಗ್ಗೆ ಅದು ತಾರಕ್ಕೇರಿದ್ದು, ಕೊಡಲಿಯಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾನೆ.
ಘಟನೆ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ಜೈ ಭಗವಾನ್, ನಿವೃತ್ತ ಯೋಧ ತನ್ನ ಹೆಂಡತಿ ಕೊಲೆ ಮಾಡಿದ್ದಾನೆ. ಪತ್ನಿಯ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಈ ಕೃತ್ಯವೆಸಗಿದ್ದಾನೆಂದು ತಿಳಸಿದ್ದಾರೆ. ಈಗಾಗಲೇ ಆರೋಪಿಯನ್ನ ವಶಕ್ಕೆ ಪಡೆದುಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.