ಜೋಶಿಮಠ್ (ಉತ್ತರಾಖಂಡ): ಹಿಮ ಸ್ಫೋಟದಿಂದ ಉಂಟಾದ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿಕೆಯಾಗಿದ್ದು, 204 ಜನರು ಕಾಣೆಯಾಗಿದ್ದಾರೆ.
ತಪೋವನ್ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಐಟಿಬಿಪಿ, ಎನ್‌ಡಿಆರ್‌ಎಫ್ ಮತ್ತು ಸೇನಾ ಪಡೆಗಳು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ. 34 ಮೃತದೇಹಗಳ ಪೈಕಿ 10 ಮಂದಿಯನ್ನು ಗುರುತಿಸಲಾಗಿದ್ದು, 24 ಮೃತದೇಹವನ್ನು ಗುರುತಿಸಲು ಸಾಧ್ಯವಾಗಿಲ್ಲ.
ಗಡಿ ಜಿಲ್ಲೆಯಾದ ಚಮೋಲಿಯಲ್ಲಿ ದೊಡ್ಡದಾದ ಸುರಂಗವಿದ್ದು, ಅಲ್ಲಿ ಅಂದಾಜು 30 - 35 ಕಾರ್ಮಿಕರು ಸಿಲುಕಿದ್ದಾರೆ ಎನ್ನಲಾಗ್ತಿದೆ. ತಪೋವನ್ ವಿದ್ಯುತ್ ಯೋಜನೆಯ ಕಾರ್ಮಿಕರನ್ನು ರಕ್ಷಣಾ ಪಡೆ ಭರವಸೆಯೊಂದಿಗೆ ಹುಡುಕುತ್ತಿದೆ.
ಓದಿ: ರಿಷಿಗಂಗಾ ನದಿ ನೀರಿನ ಮಟ್ಟ ಹೆಚ್ಚಳ: ಚಮೋಲಿಯಲ್ಲಿ ಕಾರ್ಯಾಚರಣೆ ಸ್ಥಗಿತ
ಈ ನಡುವೆ ಚಮೋಲಿ ಜಿಲ್ಲೆಯಲ್ಲಿ ಸಂಪರ್ಕ ಕಡಿತಗೊಂಡ ಹಳ್ಳಿಗಳಲ್ಲಿ ಐಟಿಬಿಪಿ ಸೇತುವೆ ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಿದೆ. ಸೇತುವೆ ಮೂಲಕ ಒಂದು ಕಡೆಯಿಂದ ಇನ್ನೊಂದು ಕಡೆಗೆ ಆಹಾರ ಪೂರೈಸಲು ನೆರವಾಗಲಿದೆ.
ಸುರಂಗದಲ್ಲಿ ಹೆಚ್ಚು ಕೆಸರು ಇರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಹಿನ್ನೆಲೆಯಾಗುತ್ತಿದೆ. ಇದನ್ನು ಯಂತ್ರಗಳ ಸಹಾಯದಿಂದ ತೆಗೆದು ಹಾಕಲಾಗುತ್ತಿದೆ ಎಂದು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆ ವಕ್ತಾರ ವಿವೇಕ್ ಕುಮಾರ್ ಪಾಂಡೆ ದೆಹಲಿಯಲ್ಲಿ ತಿಳಿಸಿದ್ದಾರೆ.