ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರು, ಗಣರಾಜ್ಯೋತ್ಸವ ದಿನದಂದು ರೈತರ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಜನತೆಯ ದಾರಿ ತಪ್ಪಿಸುವ ಹಾಗೂ ಪ್ರಚೋದನಾತ್ಮಕ ಟ್ವೀಟ್ ಮಾಡಿರುವ ಬಗ್ಗೆ ತಮ್ಮ ವಿರುದ್ಧ ದಾಖಲಾದ ಅನೇಕ ಎಫ್‌ಐಆರ್‌ಗಳ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಪತ್ರಕರ್ತರಾದ ಮೃಣಾಲ್ ಪಾಂಡೆ, ಜಾಫರ್ ಆಘಾ, ಪರೇಶ್ ನಾಥ್ ಮತ್ತು ಅನಂತ್ ನಾಥ್ ಕೂಡ ತಮ್ಮ ಮೇಲಿನ ಎಫ್‌ಐಆರ್ ವಿರುದ್ಧ ಮಂಗಳವಾರ ಸಂಜೆ ಉನ್ನತ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ.
ಜನವರಿ 30ರಂದು ದೆಹಲಿ ಪೊಲೀಸರು ತರೂರ್, ಸರ್ದೇಸಾಯಿ ಸೇರಿ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಜೊತೆಗೆ ರೈತರ ಟ್ರ್ಯಾಕ್ಟರ್ ರ‍್ಯಾಲಿ ನಡೆದ ಹಿಂಸಾಚಾರದ ಬಗ್ಗೆ ತರೂರ್ ಮತ್ತು ಸರ್ದೇಸಾಯಿ ಮತ್ತಿತರ ಪತ್ರಕರ್ತರ ವಿರುದ್ಧ ನೋಯ್ಡಾ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದರು.
ಇನ್ನು, ರೈತರ ಟ್ರಾಕ್ಟರ್ ರ್ಯಾಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ತಪ್ಪುದಾರಿಗೆಳೆಯುವ ಟ್ವೀಟ್ ಮಾಡಿರುವ ಬಗ್ಗೆ ಮಧ್ಯಪ್ರದೇಶ ಪೊಲೀಸರು ಸಹ ತರೂರ್ ಮತ್ತು ಮತ್ತಿತರ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ, ಶಶಿ ತರೂರ್ ಮತ್ತು ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ತಮ್ಮ ವಿರುದ್ಧ ದಾಖಲಾದ ಅನೇಕ ಎಫ್‌ಐಆರ್‌ಗಳ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಜನವರಿ 26ರಂದು ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ತಮ್ಮ ಬೇಡಿಕೆಯನ್ನು ಎತ್ತಿ ಹಿಡಿಯಲು ರೈತ ಸಂಘಗಳು ಕರೆದ ಟ್ರಾಕ್ಟರ್ ರ್ಯಾಲಿಯಲ್ಲಿ ಸಾವಿರಾರು ರೈತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರು.