ಕೇದಾರನಾಥ (ಉತ್ತರಾಖಂಡ) : ಚಾರ್ ಧಾಮ್ ಯಾತ್ರೆಗೆ ಕೇವಲ 40 ದಿನಗಳು ಬಾಕಿ ಇದ್ದು, ಮುಂಬರುವ ತಿಂಗಳಲ್ಲಿ ಪವಿತ್ರ ಕೇದಾರನಾಥ ದೇವಾಲಯದ ಬಾಗಿಲು ತೆರೆಯಲಿದೆ. ಹೀಗಾಗಿ, ದೇಗುಲ ಸಂಪರ್ಕಿಸುವ ಪಾದಚಾರಿ ಮಾರ್ಗವನ್ನು ಅಪಾರ ಪ್ರಮಾಣದ ಹಿಮದಿಂದ ತೆರವುಗೊಳಿಸಲಾಗುತ್ತಿದೆ. ಐದರಿಂದ ಹತ್ತು ಅಡಿಗಳಷ್ಟು ರಸ್ತೆಯಲ್ಲಿ ಹಿಮ ಹುದುಗಿದ್ದು, ಅಧಿಕಾರಿಗಳು, ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ಸಿಬ್ಬಂದಿ ಏಳು ಕಿಲೋಮೀಟರ್ ಉದ್ದದ ಪಾದಚಾರಿ ಮಾರ್ಗದ ರಸ್ತೆಯಲ್ಲಿದ್ದ ಹಿಮವನ್ನು ತೆರವುಗೊಳಿಸಿದ್ದಾರೆ.
ಕೇದಾರನಾಥ ದೇಗುಲವನ್ನು ಏಪ್ರಿಲ್ 25 ರಂದು ತೆರೆಯಲಾಗುತ್ತಿದೆ. ಈ ವೇಳೆ ಯಾತ್ರಾರ್ಥಿಗಳು ಕಾಲ್ನಡಿಗೆಯಲ್ಲಿ ಅಥವಾ ಕುದುರೆ, ಹೇಸರಗತ್ತೆಗಳ ಮೂಲಕ ಕೇದಾರನಾಥ ಧಾಮಕ್ಕೆ ಯಾವುದೇ ತೊಂದರೆಯಿಲ್ಲದೆ ತಲುಪಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪಾದಚಾರಿ ಮಾರ್ಗದ ಕೆಲವು ಸ್ಥಳಗಳಲ್ಲಿ ಹತ್ತಡಿಗೂ ಹೆಚ್ಚು ಎತ್ತರದಲ್ಲಿ ಹಿಮರಾಶಿ ಇದ್ದು ಅದನ್ನು ಕತ್ತರಿಸಿ ತೆಗೆಯಲಾಗುತ್ತಿದೆ.
ಇದನ್ನೂ ಓದಿ: ಕೇದಾರನಾಥನ ಗರ್ಭಗುಡಿಗೆ ಚಿನ್ನದ ಲೇಪನ; ವಿಶೇಷ ಅಲಂಕಾರ ಕಾರ್ಯ ಪೂರ್ಣ
ಜಿಲ್ಲಾ ಮ್ಯಾಜಿಸ್ಟ್ರೇಟ್ ಭೇಟಿ, ಪರಿಶೀಲನೆ: ಇಂದು ರುದ್ರಪ್ರಯಾಗ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಯೂರಿ ದೀಕ್ಷಿತ್ ಭೇಟಿ ನೀಡಿ, ಭಕ್ತರಿಗೆ ಕೇದಾರನಾಥ ಯಾತ್ರೆಯನ್ನು ಸುಗಮಗೊಳಿಸಲು ಕೈಗೊಳ್ಳಲಾಗುತ್ತಿರುವ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು. ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಯಾತ್ರೆಗೆ ಸಂಬಂಧಿಸಿದಂತೆ ಅಗತ್ಯ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸಲಹೆ, ಸೂಚನೆಗಳನ್ನು ನೀಡಿದ್ದಾರೆ.
ಇದನ್ನೂ ಓದಿ : ಉತ್ತರಾಖಂಡದಲ್ಲಿ ಮತ್ತೆ ಹಿಮಕುಸಿತ.. ಹಾಲಿನ ನೊರೆಯಂತೆ ಬಂದಪ್ಪಳಿಸಿದ ಹಿಮ
ಆನ್‌ಲೈನ್ ನೋಂದಣಿ ಪ್ರಾರಂಭ: ಪವಿತ್ರ ಚಾರ್ ಧಾಮ್ ಯಾತ್ರೆ 2023ರ ಅಂಗವಾಗಿ ಈಗಾಗಲೇ ಕೇದಾರನಾಥಕ್ಕೆ ಆನ್‌ಲೈನ್ ನೋಂದಣಿ ಪ್ರಾರಂಭಿಸಲಾಗಿದೆ. ಯಾತ್ರಿಕರು https://registrationandtouristcare.uk.gov.in/ ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಹಿಮದಿಂದ ತುಂಬಿದ ಕಡಿದಾದ ಪರ್ವತ ಮಾರ್ಗದ ಮೂಲಕ ಯಾತ್ರಿಕರು ಕಾಲ್ನಡಿಗೆಯಲ್ಲಿ ಸುಮಾರು 16 ಕಿಲೋ ಮೀಟರ್ ಪ್ರಯಾಣಿಸಬೇಕಿದ್ದು, ಉತ್ತರಾಖಂಡ ಸರ್ಕಾರವು ಸಾಕಷ್ಟು ವಿಶೇಷ ಕ್ರಮಗಳನ್ನು ಕೈಗೊಂಡಿದೆ.
ಇದನ್ನೂ ಓದಿ : ಉತ್ತರಾಖಂಡದಲ್ಲಿ ಮತ್ತೆ ಹಿಮಕುಸಿತ.. ಹಾಲಿನ ನೊರೆಯಂತೆ ಬಂದಪ್ಪಳಿಸಿದ ಹಿಮ
ಚಾರ್ ಧಾಮ್ ಯಾತ್ರೆ ಎಂದರೇನು?: ಉತ್ತರಾಖಂಡ ರಾಜ್ಯದಲ್ಲಿರುವ ನಾಲ್ಕು ಪವಿತ್ರ ಹಿಂದೂ ದೇವಾಲಯಗಳನ್ನು ಯಾತ್ರಿಕರ ಸಲುವಾಗಿ ಒಂದೇ ಸಮಯದಲ್ಲಿ ತೆರೆಯಲಾಗುತ್ತದೆ. ಆ ನಾಲ್ಕು ದೇವಾಲಯಗಳೆಂದರೆ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ. ಹೀಗಾಗಿ, ಉತ್ತರಾಖಂಡದ ಚಾರ್ ಧಾಮ್ ಯಾತ್ರೆಯು ಸಾಕಷ್ಟು ಧಾರ್ಮಿಕ ಮಹತ್ವ ಹೊಂದಿದೆ. ಈ ಪ್ರದೇಶಕ್ಕೆ ಜೀವಮಾನದಲ್ಲಿ ಒಮ್ಮೆಯಾದರೂ ಭೇಟಿ ನೀಡಿದರೆ ಮೋಕ್ಷ ಲಭಿಸುತ್ತದೆ ಎಂಬ ನಂಬಿಕೆ ಹಿಂದೂ ಧರ್ಮೀಯರಲ್ಲಿದೆ. ಇದರ ಜೊತೆಗೆ ಇಲ್ಲಿಗೆ ಭೇಟಿ ನೀಡುವುದರಿಂದ ತಮ್ಮ ಎಲ್ಲಾ ಪಾಪಗಳು ತೊಲಗಿ, ಪುಣ್ಯ ಲಭಿಸುತ್ತದೆ ಎನ್ನಲಾಗಿದ್ದು, 4 ಪವಿತ್ರವಾದ ಧಾಮವನ್ನು ‘ಚೋಟಾ ಚಾರ್ ಧಾಮ್’ ಎಂದೂ ಕೂಡ ಕರೆಯಲಾಗುತ್ತದೆ.
ಇದನ್ನೂ ಓದಿ: Watch video : ಬದರಿನಾಥ, ಕೇದಾರನಾಥ ದೇವಾಲಯ ಹಿಮಾವೃತ