ನವದೆಹಲಿ : ಪ್ರತಿಷ್ಠಿತ 'ಪದ್ಮ' ಪ್ರಶಸ್ತಿಗಳಿಗೆ ಭಾಜನರಾದ ಜನರ ಜೀವನ ಮತ್ತು ಕಥೆಗಳ ಬಗ್ಗೆ ಓದಿ ತಿಳಿದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ನಾಗರಿಕರಿಗೆ ಮನವಿ ಮಾಡಿದ್ದಾರೆ. 97 ನೇ ಆವೃತ್ತಿಯ ಮತ್ತು 2023 ರ ಮೊದಲ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ಮಾತನಾಡಿದರು. ಬುಡಕಟ್ಟು ಸಮುದಾಯಗಳು ಮತ್ತು ಬುಡಕಟ್ಟು ಸಮಾಜಕ್ಕೆ ಸಂಬಂಧಿಸಿದ ಜನ ಗಣನೀಯ ಸಂಖ್ಯೆಯಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತರಾಗಿರುವುದನ್ನು ಪ್ರಧಾನಿ ಒತ್ತಿ ಹೇಳಿದರು.
ಚಿತ್ರಕಾರರು, ಸಂಗೀತಗಾರರು, ರೈತರು, ಕುಶಲಕರ್ಮಿಗಳು ಹೀಗೆ ಬುಡಕಟ್ಟು ಸಮುದಾಯದ ಹಲವಾರು ಜನರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ. ಎಲ್ಲ ದೇಶವಾಸಿಗಳು ಅವರ ಸ್ಪೂರ್ತಿದಾಯಕ ಕಥೆಗಳನ್ನು ಓದಬೇಕೆಂದು ನಾನು ಕೋರುತ್ತೇನೆ. ಬುಡಕಟ್ಟು ಭಾಷೆಗಳಾದ ಟೊಟೊ, ಹೋ, ಕುಯಿ, ಕುವಿ ಮತ್ತು ಮಂದಾ ಮುಂತಾದುವುಗಳ ಬಗ್ಗೆ ಕೆಲಸ ಮಾಡಿದ ಅನೇಕ ಗಣ್ಯರಿಗೆ ಈ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ಹೇಳಿದರು.
ಬುಡಕಟ್ಟು ಜೀವನವು ನಗರ ಜೀವನಕ್ಕಿಂತ ಭಿನ್ನವಾಗಿದೆ. ಅದು ತನ್ನದೇ ಆದ ಸವಾಲುಗಳನ್ನು ಹೊಂದಿದೆ. ಇದೆಲ್ಲದರ ಹೊರತಾಗಿಯೂ, ಬುಡಕಟ್ಟು ಸಮಾಜಗಳು ಯಾವಾಗಲೂ ತಮ್ಮ ಸಂಪ್ರದಾಯಗಳನ್ನು ಉಳಿಸಿಕೊಳ್ಳಲು ಉತ್ಸುಕವಾಗಿವೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಮತ್ತು ಈಗ ಜಗತ್ತು ಅವರ ಬಗ್ಗೆ ತಿಳಿದುಕೊಳ್ಳುತ್ತದೆ. ಸಿದ್ದಿ, ಜಾರ್ವಾ ಮತ್ತು ಒಂಗೆ ಬುಡಕಟ್ಟು ಜನಾಂಗದವರೊಂದಿಗೆ ಕೆಲಸ ಮಾಡುವವರಿಗೂ ಈ ಬಾರಿ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಧಾನಿ ಮೋದಿ ಗಮನ ಸೆಳೆದರು.
ಈ ಬಾರಿ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಸಂತೂರ್, ಬಮ್ಹೂಮ್, ದ್ವಿತಾರಾ ಮುಂತಾದ ನಮ್ಮ ಸಾಂಪ್ರದಾಯಿಕ ಸಂಗೀತ ವಾದ್ಯಗಳ ಮಾಧುರ್ಯವನ್ನು ಪಸರಿಸಿದವರು ಸೇರಿದ್ದಾರೆ. ಗುಲಾಮ್ ಮೊಹಮ್ಮದ್ ಝಾಜ್, ಮೋವಾ ಸು ಪಾಂಗ್, ರಿ ಸಿಂಗ್ಬೋರ್ ಕುರ್ಕಾ ಲಾಂಗ್, ಮುನಿ ವೆಂಕಟಪ್ಪ ಮತ್ತು ಮಂಗಲ್ ಕಾಂತಿ ರೈ ಇವರ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು. ತಮ್ಮ ಸಂಸ್ಕೃತಿಯನ್ನು ಉಳಿಸಲು ನಿರಂತರವಾಗಿ ಶ್ರಮಿಸುತ್ತಿರುವ ಮತ್ತು ಪದ್ಮ ಪ್ರಶಸ್ತಿಗಳನ್ನು ಪಡೆದಿರುವ ಈಶಾನ್ಯ ಜನರ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳನ್ನು ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಹೀಗೆ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. ಕಲೆ, ಸಮಾಜಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಇಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆಯಂತಹ ವಿವಿಧ ವಿಭಾಗಗಳು ಮತ್ತು ಚಟುವಟಿಕೆಗಳ ಕ್ಷೇತ್ರಗಳಲ್ಲಿ ಪ್ರತಿ ವರ್ಷ ಗಣರಾಜ್ಯೋತ್ಸವದ ಮುನ್ನ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ.
'ಪದ್ಮ ವಿಭೂಷಣ' ಪ್ರಶಸ್ತಿಯನ್ನು ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ. ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ 'ಪದ್ಮಭೂಷಣ' ಮತ್ತು ಯಾವುದೇ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಗಾಗಿ 'ಪದ್ಮಶ್ರೀ' ನೀಡಲಾಗುತ್ತದೆ. ಡಿಸೆಂಬರ್ 25, 2022 ರಂದು ಪ್ರಧಾನಿ ಮೋದಿ ಅವರು ಮನ್ ಕಿ ಬಾತ್‌ನ 96 ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಅದು 2022 ರ ಕೊನೆಯ ಮನ್ ಕಿ ಬಾತ್ ಆಗಿತ್ತು. 2022 ರಲ್ಲಿ ದೇಶವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಆಗ ಮೋದಿ ಹೇಳಿದ್ದರು.
ಇದನ್ನೂ ಓದಿ: ಈಗಲೇ ಕಾರ್ಯನಿರ್ವಹಿಸಿ, ರೋಗವನ್ನು ಕೊನೆಗೊಳಿಸಿ: 'ವಿಶ್ವ ಕುಷ್ಠರೋಗ ದಿನ 2023'ರ ಘೋಷ ವಾಕ್ಯ