ಮುಂಬೈ: ಶಿವಸೇನೆ ನಾಯಕ, ಸಂಸದ ಸಂಜಯ್ ರಾವತ್ ಅವರ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮಂಗಳವಾರದಂದು ಜಪ್ತಿ ಮಾಡಿಕೊಂಡಿದೆ. 1,034 ಕೋಟಿ ಪತ್ರಾ ಚಾಲ್ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಯು ಸಂಜಯ್ ರಾವತ್ ಆಸ್ತಿಯನ್ನು ಜಪ್ತಿ ಮಾಡಿಕೊಂಡಿದೆ. ''ನನ್ನ ಆಸ್ತಿಯನ್ನು ವಶಪಡಿಸಿಕೊಳ್ಳಲಿ, ನನ್ನನ್ನು ಶೂಟ್ ಮಾಡಲಿ ಅಥವಾ ಜೈಲಿಗೆ ಕಳುಹಿಸಲಿ. ಇದಕ್ಕೆ ನಾನು ಹೆದರುವುದಿಲ್ಲ. ಸತ್ಯಕ್ಕೆ ಜಯ ಸಿಗುತ್ತದೆ'' ಎಂದು ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದರು.
ಇಂದು ಸಂಜಯ್ ರಾವತ್ ದೊಡ್ಡ ಆರೋಪವೊಂದನ್ನು ಮಾಡಿದ್ದಾರೆ. ಅವರು ಬಿಜೆಪಿ ನಾಯಕ ಕಿರೀತ್ ಸೋಮಯ್ಯ ವಿರುದ್ಧ ಐಎನ್‌ಎಸ್ ವಿಕ್ರಾಂತ್ ಹಡಗು ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಐಎನ್‌ಎಸ್ ವಿಕ್ರಾಂತ್ ಹಡಗನ್ನು (ವಿಮಾನವಾಹಕ ನೌಕೆ) ಉಳಿಸಲು ಸಂಗ್ರಹಿಸಿದ ಹಣ ರಾಜ್ಯಪಾಲರ ಕಚೇರಿಗೆ ತಲುಪಿಲ್ಲ ಎಂದು ರಾವತ್ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ.
ಆರ್‌ಟಿಐನಿಂದ ಈ ಬಗ್ಗೆ ಮಾಹಿತಿ ಬಂದಿದೆ ಎಂದು ಹೇಳಿದ್ದಾರೆ. ಇದು ಬಿಜೆಪಿ ನಾಯಕ ಸೋಮಯ್ಯ ಅವರ ದೇಶದ್ರೋಹ ಎಂದು ಕಿಡಿ ಕಾರಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಸಂಜಯ್ ರಾವತ್ ಕೇಂದ್ರೀಯ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಐಎನ್‌ಎಸ್ ವಿಕ್ರಾಂತ್ ಹಡಗಿನ ರಕ್ಷಣೆಗಾಗಿ ಸಂಗ್ರಹಿಸಿದ ಹಣ ರಾಜ್ಯಪಾಲರ ಕಚೇರಿಗೆ ತಲುಪಿಲ್ಲ ಎಂಬುದು ಆರ್‌ಟಿಐ ಅಡಿಯಲ್ಲಿ ಬೆಳಕಿಗೆ ಬಂದಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಶಿವಸೇನಾ ಸಂಸದನಿಗೆ ಇಡಿ ಶಾಕ್.. ಸಂಜಯ್ ರಾವತ್ ಪತ್ನಿ ಆಸ್ತಿ ಮುಟ್ಟುಗೋಲು
ಆರ್‌ಟಿಐ ಕಾರ್ಯಕರ್ತ ವೀರೇಂದ್ರ ಉಪಾಧ್ಯಾಯ ಅವರು ರಾಜ್ಯಪಾಲರ ಕಚೇರಿಯಿಂದ ಮಾಹಿತಿ ಕೇಳಿದ್ದರು. ರಾಜ್ಯಪಾಲರ ಕಚೇರಿಗೆ ಅಂತಹ ಯಾವುದೇ ಹಣ ಬಂದಿಲ್ಲ ಎಂದು ರಾವತ್ ಹೇಳಿದ್ದಾರೆ. ಕಳೆದ ತಿಂಗಳು ಈ ಮಾಹಿತಿ ಬಂದಿದೆ ಎಂದರು. ಸೋಮಯ್ಯ ಸಿಎ ಆಗಿರುವುದರಿಂದ ಅಂತಹ ಹಣವನ್ನು ಹೇಗೆ ಅರಗಿಸಿಕೊಳ್ಳಬೇಕು ಎಂಬುದು ಅವರಿಗೆ ತಿಳಿದಿದೆ ಎಂದು ಸಂಜಯ್ ರಾವತ್ ತೀವ್ರವಾಗಿ ಆರೋಪಿಸಿದ್ದಾರೆ.