ನವದೆಹಲಿ: ರಾಷ್ಟ್ರರಾಜಧಾನಿಯ ಗಡಿಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕಾನೂನುಗಳ ವಿರುದ್ಧ ಅನ್ನದಾತರ ಹೋರಾಟ ಮುಂದುವರಿಯುತ್ತಲೇ ಇದೆ. ಈ ಮಧ್ಯೆ ಭಾರತೀಯ ಕಿಸಾನ್ ಒಕ್ಕೂಟದ ರೈತ ಮುಖಂಡ ರಾಕೇಶ್ ಟಿಕಾಯತ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಿ ಸಭೆ ನಡೆಸಿದ್ದಾರೆ. ವರದಿಗಳ ಪ್ರಕಾರ ಸಭೆಯಲ್ಲಿ ಕೃಷಿ ಮತ್ತು ರಾಜ್ಯದ ಕೃಷಿ ನೀತಿ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ರಾಕೇಶ್ ಟಿಕಾಯತ್, ರೈತರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಎಲ್ಲಾ ಯೋಜನೆಗಳ ಪಟ್ಟಿಯನ್ನು ಮಮತಾ ಅವರಿಗೆ ವರ್ಗಾಯಿಸಿದ್ದೇನೆ ಎಂದರು.
ಉತ್ತರಪ್ರದೇಶದಲ್ಲಿ ಬಿಜೆಪಿ ವಿರುದ್ಧ ರೈತರು ದಂಗೆಯೇಳುತ್ತಿದ್ದಾರೆ. ಚುನಾವಣಾ ಸಮಯದಲ್ಲಿ ಬಿಜೆಪಿಯು ರೈತರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಿಲ್ಲ. ಬಿಜೆಪಿಯು ರೈತರ ಏಳ್ಗೆಗಾಗಿ ಯಾವುದೇ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲ. ಬದಲಾಗಿ, ದೇಶವನ್ನೇ ಮಾರುವ ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ. ಈಗಾಗಲೇ ಆಲೂಗಡ್ಡೆ, ಕಬ್ಬಿನ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ರೊಚ್ಚಿಗೆದಿದ್ದಾರೆ. ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಅಷ್ಟೊತ್ತಿಗೆ ಮುಜಫರ್ನಗರದಲ್ಲಿ ಬೃಹತ್ ಮಹಾಪಂಚಾಯತ್ ಯೋಜನೆ ನಡೆಸಲು ನಿರ್ಧರಿಸಿದ್ದೇವೆ ಎಂದರು.
ಅಲ್ಲದೆ, ಮಮತಾ ಬ್ಯಾನರ್ಜಿಯವರೂ, ಕೇಂದ್ರ ಜಾರಿಗೊಳಿಸಿರುವ ಮೂರು ಕಾನೂನುಗಳ ವಿರುದ್ಧವಾಗಿದ್ದಾರೆ. ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಅವರು, ಕೇಂದ್ರಕ್ಕೆ ಪತ್ರ ಬರೆದಿದ್ದರು ಎಂದರು.
ಇದನ್ನೂ ಓದಿ:ಯುಪಿ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ: ಮೋದಿ ಭೇಟಿ ಮಾಡಿದ ಯೋಗಿ
ಉತ್ತರಪ್ರದೇಶದಲ್ಲಿ ಜಾರಿಗೆ ತಂದಿರುವ ಪ್ಯಾನ್ ಇಂಡಿಯಾ ಮೀಟ್ ಅನ್ನು ಬಂಗಾಳದಲ್ಲಿಯೂ ಜಾರಿಗೊಳಿಸುತ್ತೇವೆ. ಯುಪಿಯಲ್ಲಿ ಕಳೆದ 12 ವರ್ಷಗಳಿಂದಲೂ ಈ ಯೋಜನೆ ಜಾರಿಯಲ್ಲಿದೆ. ರೈತರ ಸಮಸ್ಯೆಗಳನ್ನು ಪರಿಹರಿಸಲು ಇಂಥ ಸಭೆಗಳು ಪ್ರಯೋಜನಕಾರಿ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.