ಮುಂಬೈ: ಷೇರುಪೇಟೆ ಹೂಡಿಕೆದಾರ, ಬಿಲಿಯೇನರ್ ಹಾಗು ಆಕಾಸಾ ವಿಮಾನಯಾನ ಸಂಸ್ಥಾಪಕ ರಾಕೇಶ್ ಜುಂಜುನ್ವಾಲಾ ಮುಂಬೈನಲ್ಲಿ ಇಂದು ನಿಧನ ಹೊಂದಿದರು. ಅವರಿಗೆ 62 ವರ್ಷ ವಯಸ್ಸಾಗಿತ್ತು. ರಾಕೇಶ್ ಜುಂಜುನ್ವಾಲಾ ಅವರ ಆಕಾಸಾ ಏರ್ಲೈನ್ಸ್ ಆಗಸ್ಟ್ 7 ರಂದು ಚಾಲನೆ ಕಂಡಿತ್ತು. ಫೋರ್ಬ್ಸ್ ಪಟ್ಟಿಯ ಪ್ರಕಾರ ಇವರು 2021 ರಲ್ಲಿ ಭಾರತದ 36ನೇ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ 438 ನೇ ಶ್ರೀಮಂತ ವ್ಯಕ್ತಿಯಾಗಿದ್ದರು.
ಜುಂಜುನ್ವಾಲಾ ಅವರು ಅನೇಕ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದರು. ಆಗಸ್ಟ್ 2022 ರ ಹೊತ್ತಿಗೆ ಅವರ ನಿವ್ವಳ ಮೌಲ್ಯವು 5.8 ಬಿಲಿಯನ್ ಡಾಲರ್ ಆಗಿತ್ತು ಎಂದು ವರದಿಗಳು ತಿಳಿಸಿವೆ. ತಮ್ಮ ಸಂಸ್ಥೆಯಾದ ರೇರ್ ಎಂಟರ್‌ಪ್ರೈಸಸ್ ಮೂಲಕ ವಿಶ್ವದ ಹಲವು ಷೇರುಪೇಟೆ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿಯೂ ಹೂಡಿಕೆ ಮಾಡಿದ್ದರು. ಜುಂಜುನ್ವಾಲಾ ಅವರನ್ನು ಭಾರತದ ವಾರೆನ್ ಬಫೆಟ್ ಎಂದೂ ಕರೆಯಲಾಗುತ್ತದೆ.
ಸ್ಟಾರ್ ಹೆಲ್ತ್, ಟೈಟಾನ್, ರಾಲಿಸ್ ಇಂಡಿಯಾ, ಎಸ್ಕಾರ್ಟ್ಸ್, ಕೆನರಾ ಬ್ಯಾಂಕ್, ಇಂಡಿಯನ್ ಹೋಟೆಲ್ಸ್ ಕಂಪನಿ, ಆಗ್ರೋ ಟೆಕ್ ಫುಡ್ಸ್, ನಜಾರಾ ಟೆಕ್ನಾಲಜೀಸ್, ಟಾಟಾ ಮೋಟಾರ್ಸ್ ಸೇರಿದಂತೆ 47 ಕಂಪನಿಗಳಲ್ಲಿ ಇವರು ಪಾಲು ಹೊಂದಿದ್ದಾರೆ.
ಪ್ರಧಾನಿ ಮೋದಿ ಸಂತಾಪ: ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ರಾಕೇಶ್ ಜುಂಜುನ್ವಾಲಾ ಅದಮ್ಯ ಚೇತನರಾಗಿದ್ದರು. ಹಾಸ್ಯ ಮತ್ತು ಒಳನೋಟವುಳ್ಳ ಅವರು ಭಾರತದ ಆರ್ಥಿಕ ಜಗತ್ತಿಗೆ ಅಳಿಸಲಾಗದ ಕೊಡುಗೆ ನೀಡಿ ಹೋಗಿದ್ದಾರೆ. ದೇಶದ ಆರ್ಥಿಕ ಪ್ರಗತಿಯ ಬಗ್ಗೆ ಅವರು ದೂರಗಾಮಿ ಯೋಜನೆ ಹೊಂದಿದ್ದರು. ಇಂದು ಅವರ ಅಗಲಿಕೆ ದುಃಖ ತಂದಿದೆ. ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಪ್ರಧಾನಿ ತಿಳಿಸಿದ್ದಾರೆ.
ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತೋತ್ಸವ ಹೊಸ್ತಿಲಲ್ಲಿ ಉದ್ಘಾಟನೆಗೆ ಸಜ್ಜಾಗಿದೆ ವಿಶ್ವದ ಅತಿದೊಡ್ಡ ಸೇತುವೆ