ಉದಯಪುರ: ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ನಲ್ಲಿ ಭಾರತಕ್ಕೆ ಅವಕಾಶ ದೊರೆತ್ತಿಲ್ಲ. ಆದರೂ ರಾಜಸ್ಥಾನದ ಉದಯಪುರದ ಕಲಾವಿದರೊಬ್ಬರು ಫಿಫಾ ಟ್ರೋಫಿಯ ವಿಶ್ವದ ಅತ್ಯಂತ ಚಿಕ್ಕ ಪ್ರತಿಕೃತಿಯನ್ನು ಚಿನ್ನದಲ್ಲಿ ಕೆತ್ತಿ ಸುದ್ದಿಯಾಗಿದ್ದಾರೆ. ಈ ಚಿಕ್ಕ ಚಿನ್ನದ ಟ್ರೋಫಿಯನ್ನು ವಿಜೇತರಿಗೆ ಮೂಲ ಟ್ರೋಫಿಯೊಂದಿಗೆ ನೀಡಲಾಗುತ್ತದೆ ಎಂದು ಅವರು ಭಾವಿಸಿದ್ದಾರೆ.
ಚಿನ್ನದಿಂದ ರೆಡಿಯಾಗಿದೆ ವಿಶ್ವದ ಅತ್ಯಂತ ಚಿಕ್ಕ ಫಿಫಾ ಕಪ್: ಚಿನ್ನದಿಂದ ಮಾಡಿದ ಟ್ರೋಫಿ ತುಂಬಾ ಅಂದ್ರೆ ತುಂಬಾನೇ ಚಿಕ್ಕದಾಗಿದೆ. ಅದನ್ನು ನೋಡಲು ಲೆನ್ಸ್ ಬಳಸಬೇಕಾಗುತ್ತದೆ. ಈಟಿವಿ ಭಾರತ್ ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಕಲಾವಿದ ಇಕ್ಬಾಲ್, ಕತಾರ್ ಆತಿಥ್ಯ ವಹಿಸುತ್ತಿರುವ ಫಿಫಾ ವಿಶ್ವಕಪ್ ಮೇಲೆ ಎಲ್ಲರ ದೃಷ್ಠಿ ನೆಟ್ಟಿದೆ. ಭಾರತ ತಂಡ ಇದರಲ್ಲಿ ಪಾಲ್ಗೊಳ್ಳದಿದ್ದರೂ ಅರ್ಜೆಂಟಿನಾ ಸೇರಿದಂತೆ ಅನೇಕ ದೇಶಗಳ ಕಣ್ಣು ಫಿಫಾ ವಿಶ್ವಕಪ್ ಮೇಲೆ ನೆಟ್ಟಿದೆ ಎಂದರು.
ಪ್ರಧಾನಿ ಮೋದಿಗೆ ಪತ್ರ : ಕತಾರ್‌ದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಯಾವ ತಂಡ ಗೆದ್ದರೂ ಅವರಿಗೆ ನಾನು ಮಾಡಿದ ವಿಶ್ವದ ಅತ್ಯಂತ ಚಿಕ್ಕ ಟ್ರೋಫಿಯನ್ನು ಸಹ ನೀಡಬೇಕೆಂದು ನಾನು ಬಯಸುತ್ತೇನೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನೂ ಬರೆದಿದ್ದೇನೆ. ಟ್ರೋಫಿ ತುಂಬಾ ಚಿಕ್ಕದಾಗಿದೆ. ಅದು ಮೆಗಾ ಗಾತ್ರದ ಸೂಜಿಯ ರಂಧ್ರದ ಮೂಲಕ ಸುಲಭವಾಗಿ ಹಾದುಹೋಗುತ್ತದೆ ಎಂದು ಸಕ್ಕಾ ತಿಳಿಸಿದರು.
ಈ ಟ್ರೋಫಿಯ ತೂಕವೆಷ್ಟು ಗೊತ್ತಾ?: ಟ್ರೋಫಿಯನ್ನು ಮಾಡಲು ನಾನು ಸುಮಾರು ಮೂರು ದಿನಗಳನ್ನು ತೆಗೆದುಕೊಂಡಿದ್ದೇನೆ. ಟ್ರೋಫಿಯ ಸಣ್ಣ ಆಯಾಮಗಳನ್ನು ಉಳಿ ಮಾಡುವುದು ಸವಾಲಿನ ಸಂಗತಿಯಾಗಿದೆ. ಅಚ್ಚರಿ ಎಂದರೆ ಚಿನ್ನದ ತೂಕದ ಯಂತ್ರಕ್ಕೂ ಸಹ ಈ ಟ್ರೋಫಿಯ ತೂಕ ಹೇಳಲು ಸಾಧ್ಯವಾಗಲಿಲ್ಲ ಎಂದ ಅವರು, ನಾನು ಬಾಲ್ಯದಿಂದಲೂ ಸಣ್ಣ ಲೇಖನಗಳನ್ನು ತಯಾರಿಸಲು ಇಷ್ಟಪಡುತ್ತಿದ್ದೆ ಎಂದು ಹೇಳಿದರು.
ಭಾರತದ ಹೆಸರು ಅಗ್ರಸ್ಥಾನದಲ್ಲಿ ಇರಬೇಕೆಂಬುದು ನನ್ನ ಆಸೆ: ವಿಶ್ವದ ಅತ್ಯುತ್ತಮ ಚಿನ್ನದ ಕರಕುಶಲತೆಯ ದಾಖಲೆಗಳು ಅಮೆರಿಕ, ಆಸ್ಟ್ರೇಲಿಯಾ ಮತ್ತು ಚೀನಾದಂತಹ ದೇಶಗಳ ಹೆಸರಿನಲ್ಲಿವೆ. ಭಾರತದ ಹೆಸರು ಅಗ್ರಸ್ಥಾನದಲ್ಲಿರಬೇಕೆಂದು ನಾನು ಬಯಸಿದ್ದೇನೆ. ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀರಾಮನ ದೇವಾಲಯಕ್ಕಾಗಿ ನಾನು ಚಿನ್ನದ ಇಟ್ಟಿಗೆ, ಗಂಟೆ ಮತ್ತು ಎರಡು ಕಂಬಗಳನ್ನು ಒಳಗೊಂಡಂತೆ ಮೂರು ಸೂಕ್ಷ್ಮ ಕಲಾಕೃತಿಗಳನ್ನು ರಚಿಸಿದ್ದೇನೆ. ಅಷ್ಟೇ ಅಲ್ಲ, ವಿಶ್ವದ ಅತ್ಯಂತ ಚಿಕ್ಕ ಚಿನ್ನ-ಬೆಳ್ಳಿ ಪುಸ್ತಕವನ್ನೂ ಕೆತ್ತಿದ್ದೇನೆ ಅಂತಾ ಹೇಳಿದರು.
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಇಕ್ಬಾಲ್ ಹೆಸರು: ಅರೇಬಿಕ್ ಭಾಷೆಯಲ್ಲಿ ಅಲ್ಲಾ, ಸಂಸ್ಕೃತದಲ್ಲಿ ಓಂ, ಕ್ರಿಶ್ಚಿಯನ್ ಧರ್ಮದ ಶಿಲುಬೆ ಮತ್ತು ಸಿಖ್ ಧರ್ಮದ ಖಂಡ ಪುಸ್ತಕಗಳನ್ನು ಇವರು ಕೆತ್ತಿದ್ದಾರೆ. ಪುಸ್ತಕವು 64 ಪುಟಗಳನ್ನು ಹೊಂದಿದೆ. ಇದಲ್ಲದೇ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಕೇವಲ 0.5 ಮಿ.ಮೀ ತ್ರಿವರ್ಣ ಧ್ವಜವನ್ನೂ ರಚಿಸಿದ್ದರು. ಇಕ್ಬಾಲ್ ಅವರು ಚಿಕ್ಕ ಚಿನ್ನದ ಸರವನ್ನು ತಯಾರಿಸುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.
ನೂರು ವಿಶ್ವ ದಾಖಲೆಗಳ ಸರದಾರ: ಇದಲ್ಲದೆ ಅವರು ವಿಶ್ವದ ಅತ್ಯಂತ ಚಿಕ್ಕ ಟೀ ಕೆಟಲ್ ಮತ್ತು ಚಿಕ್ಕ ಚಿನ್ನದ ಸ್ಟಂಪ್ ಅನ್ನು ಸಹ ರಚಿಸಿದ್ದಾರೆ. ಇಕ್ಬಾಲ್ ಅವರು ಇಲ್ಲಿಯವರೆಗೆ 100 ವಿಶ್ವ ದಾಖಲೆಗಳನ್ನು ರಚಿಸಿದ್ದಾರೆ. ಅದು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್, ವಿಶಿಷ್ಟ ವಿಶ್ವ ದಾಖಲೆಗಳು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಅಮೇಜಿಂಗ್ ವರ್ಲ್ಡ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.
ಓದಿ: ಸೌದಿ ಅರೇಬಿಯಾ ವಿರುದ್ಧ ಮೆಕ್ಸಿಕೊ ಗೆಲುವು; ಆದರೂ ನಾಕೌಟ್ ಭಾಗ್ಯವಿಲ್ಲ