ನವದೆಹಲಿ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಹೀಗಾಗಿ ರಾಜಸ್ಥಾನದಲ್ಲಿನ ನಾಯಕತ್ವ ಬದಲಾವಣೆ ಸಂಬಂಧ ನಿರ್ಣಯ ಕೈಗೊಳ್ಳಲು ಜೈಪುರದಲ್ಲಿರುವ ಸಿಎಂ ಗೆಹ್ಲೋಟ್ ಅವರ ನಿವಾಸದಲ್ಲಿ ಇಂದು ಸಂಜೆ 7 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆ ನಡೆಯಲಿದೆ. ರಾಜಸ್ಥಾನದಲ್ಲಿ ನಾಯಕರ ಬದಲಾವಣೆ ನಿರ್ಧಾರದ ಬಗ್ಗೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿರ್ಣಯವನ್ನು ಕೂಡ ಇಲ್ಲಿ ಅಂಗೀಕರಿಸಲಾಗುತ್ತದೆ.
ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ಸಿಎಂ ಅಶೋಕ್ ಗೆಹ್ಲೋಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇಂದಿನ ಸಭೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ರಾಜಸ್ಥಾನದ ಉಸ್ತುವಾರಿ ಅಜಯ್ ಮಾಕನ್, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಲಿದ್ದಾರೆ. ಇದಕ್ಕೂ ಮುನ್ನ ಶನಿವಾರ ಅಜಯ್ ಮಾಕನ್ ಅವರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದರು.
ಜೈಪುರದಲ್ಲಿ ನಡೆಯಲಿರುವ ರಾಜಸ್ಥಾನ ಸಿಎಲ್‌ಪಿ ಸಭೆಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಅವರನ್ನು ವೀಕ್ಷಕರನ್ನಾಗಿ ಕಾಂಗ್ರೆಸ್ ಅಧ್ಯಕ್ಷರು ನೇಮಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಅಶೋಕ್ ಗೆಹ್ಲೋಟ್ ಮತ್ತು ಕೇಂದ್ರದ ಮಾಜಿ ಸಚಿವ ಶಶಿ ತರೂರ್ ನಡುವೆ ಪೈಪೋಟಿ ಏರ್ಪಟ್ಟಿದೆ. ಸೆಪ್ಟೆಂಬರ್ 30ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಅಕ್ಟೋಬರ್ 19ರಂದು ನೂತನ ಕಾಂಗ್ರೆಸ್ ಅಧ್ಯಕ್ಷರು ಯಾರೆಂಬ ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು ಚುನಾವಣಾ ಅಧಿಕಾರಿಯಾಗಿದ್ದು, ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಾಮಪತ್ರ ಸ್ವೀಕಾರ ಕಾರ್ಯ ನಡೆಯಲಿದೆ.
1998ರಲ್ಲಿ ಸೋನಿಯಾ ಗಾಂಧಿ ಸೀತಾರಾಮನ್ ಕೇಸ್ರಿ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಮಾಡಿದ ನಂತರ 25 ವರ್ಷಗಳಲ್ಲಿ ಕಾಂಗ್ರೆಸ್ಗೆ ಗಾಂಧಿಯೇತರ ಮುಖ್ಯಸ್ಥರು ಕಣದಲ್ಲಿರುವುದು ಇದೇ ಮೊದಲಾಗಿದೆ. 1997ರಲ್ಲಿ ಶರದ್ ಪವಾರ್ ಮತ್ತು ರಾಜೇಶ್ ಪೈಲಟ್ ಅವರನ್ನು ಸೀತಾರಾಮ್ ಕೇಸ್ರಿ ಸೋಲಿಸಿದಾಗ ಪಕ್ಷಕ್ಕೆ ಕೊನೆಯ ಬಾರಿಗೆ ಗಾಂಧಿಯೇತರ ಮುಖ್ಯಸ್ಥರಾಗಿದ್ದರು.
ಈ ಬಾರಿ ಗಾಂಧಿ ಕುಟುಂಬದಿಂದ ಯಾವುದೇ ಅಭ್ಯರ್ಥಿ ಇರುವುದಿಲ್ಲ ಎಂದು ಗೆಹ್ಲೋಟ್ ಈ ಹಿಂದೆಯೇ ಸ್ಪಷ್ಟಪಡಿಸಿದ್ದರು. ಕಾಂಗ್ರೆಸ್ ಅಧ್ಯಕ್ಷರಾಗಬಯಸುವ ಪ್ರತಿಯೊಬ್ಬರ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಹಲವು ಬಾರಿ ಮನವಿ ಮಾಡಿದ್ದೇನೆ. ಅವರೂ ಕೂಡ ಗಾಂಧಿ ಕುಟುಂಬದಿಂದ ಯಾರೂ ಮುಂದಿನ ಮುಖ್ಯಸ್ಥರಾಗಬಾರದು ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಗೆಹ್ಲೋಟ್ ಹೇಳಿದ್ದರು.
ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಗೆಹ್ಲೋಟ್ ಸಾರ್ವಜನಿಕವಾಗಿ ಸ್ಪಷ್ಟಪಡಿಸಿದ್ದು, ಅವರಿಗೆ ಸ್ಪರ್ಧಿಯಾಗಿ ಶಶಿ ತರೂರ್ ಕಣದಲ್ಲಿದ್ದಾರೆ. ಶಶಿ ತರೂರ್ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರನ್ನು ಭೇಟಿ ಮಾಡಿದ್ದಾರೆ. ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಅವರ ನಿಕಟ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಬ್ಯುಸಿ.. ಪ್ರಿಯಾಂಕಾ ಹೆಗಲಿಗೆ ಗುಜರಾತ್ ಎಲೆಕ್ಷನ್ ಹೊಣೆ?