ಪುಣೆ(ಮಹಾರಾಷ್ಟ್ರ): ರಾಜ್ ಠಾಕ್ರೆ ಇದೇ ಮೊದಲ ಬಾರಿಗೆ ಮಹಾರಾಷ್ಟ್ರದ ಟ್ರಾಫಿಕ್ ಸಮಸ್ಯೆ, ರಸ್ತೆ ಅಪಘಾತಗಳ ಕುರಿತು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಟೀಕಿಸಿದ್ದಾರೆ. ದೇಶದ ಕೇಂದ್ರ ಸಾರಿಗೆ ಸಚಿವರು ಮಹಾರಾಷ್ಟ್ರದವರಾಗಿದ್ದರೂ, ಮುಂಬೈ - ಗೋವಾ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಲು 17 ವರ್ಷಗಳನ್ನು ತೆಗೆದುಕೊಂಡಿದೆ. ಇದರಲ್ಲಿ ಮಹಾರಾಷ್ಟ್ರ ಸರ್ಕಾರದ ವೈಫಲ್ಯವು ಹೌದು. ಪ್ರಸ್ತುತ ಎಲ್ಲ ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳುತ್ತಿವೆ. ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರೇ ಇಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಟೀಕಾಪ್ರಹಾರ ನಡೆಸಿದ್ದಾರೆ.
ಪುಣೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರಸ್ತುತ ಮಹಾರಾಷ್ಟ್ರದ ರಾಜಕೀಯ ಮತ್ತು ರಸ್ತೆಗಳ ಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಟೋಲ್ ಬೂತ್ ಧ್ವಂಸಗೊಳಿಸಿದ್ದಕ್ಕಾಗಿ ಅಮಿತ್ ಠಾಕ್ರೆ ಅವರನ್ನು ಬಿಜೆಪಿ ಟೀಕಿಸುತ್ತಿದೆ. ಹೆಚ್ಚು ಟೋಲ್ ಸಂಗ್ರಹಿಸುತ್ತಿರುವ ಮಹಿತಾಕರ್ ಎಂಬ ವ್ಯಕ್ತಿ ಯಾರು? ಅವರೊಂದಿಗಿನ ಒಪ್ಪಂದಗಳೇನು? ಎಂಬುದನ್ನು ಬಿಜೆಪಿ ಉತ್ತರ ನೀಡಬೇಕು ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಯಾರಾದರೂ ಯಾರನ್ನಾದರೂ ಭೇಟಿಯಾದಾಗ ಮೈತ್ರಿ ಎಂಬ ಅರ್ಥವಲ್ಲ ಎಂದ ಅವರು, ಇದೇ ವೇಳೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು. ಅಮಿತ್ ಠಾಕ್ರೆ ಮಹಾರಾಷ್ಟ್ರ ಪ್ರವಾಸ ಮಾಡುತ್ತಿದ್ದಾರೆ. ಸಿನ್ನಾರ್ನ ಸಮೃದ್ಧಿ ಹೆದ್ದಾರಿಯಲ್ಲಿರುವ ಟೋಲ್ ಬೂತ್‌ನಲ್ಲಿ ಅವರನ್ನು ತಡೆದರು. ಆ ವೇಳೆ ಟೋಲ್ ಬೂತ್ ಸಿಬ್ಬಂದಿ ಅಸಭ್ಯವಾಗಿ ಮಾತನಾಡಿದ್ದರಿಂದ ಎಂಎನ್‌ಎಸ್ ಕಾರ್ಯಕರ್ತರು ಟೋಲ್ ಬೂತ್ ಧ್ವಂಸಗೊಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಟೋಲ್ ಮುಕ್ತ ಮಹಾರಾಷ್ಟ್ರದ ಬಗ್ಗೆ ಬಿಜೆಪಿ ಮಾತನಾಡಬೇಕು ಎಂದು ಅವರು ಆಗ್ರಹಿಸಿದರು.
ಸಮೃದ್ಧಿ ಹೆದ್ದಾರಿಯಲ್ಲಿ ಈವರೆಗೆ 400 ಮಂದಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿನ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಮಹಾರಾಷ್ಟ್ರದ ರಸ್ತೆಗಳು ಹದಗೆಟ್ಟಿವೆ. ರಸ್ತೆಯ ಸ್ಥಿತಿ ಹೀಗೇಕೆ ಎಂದು ಉಸ್ತುವಾರಿ ಸಚಿವರನ್ನೇ ಕೇಳಬೇಕು. ಮಹಾರಾಷ್ಟ್ರದಲ್ಲಿ ರಸ್ತೆಗಳನ್ನು ಸರಿಪಡಿಸಲು ಗಡ್ಕರಿ ವಿಫಲವಾಗಿದ್ದು, ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಬಾಂದ್ರಾ ವರ್ಲಿ ಸಮುದ್ರ ಸಂಪರ್ಕವು 10 ವರ್ಷಗಳನ್ನು ತೆಗೆದುಕೊಂಡಿತು. ರಾಮಾಯಣದ ರಾಮಸೇತು ಸೇತುವೆಯನ್ನು ಕೇವಲ 12 ವರ್ಷಗಳಲ್ಲಿ ಪೂರ್ಣಗೊಳಿಸಲಾಯಿತು. ಆದರೆ ಇಲ್ಲಿ ಸುಗಮ ರಸ್ತೆಗಳ ನಿರ್ಮಾಣ ಬೇಗ ಆಗುವುದಿಲ್ಲ ಎಂದು ರಾಜ್ ಠಾಕ್ರೆ ರಸ್ತೆ ಕಾಮಗಾರಿಯನ್ನು ಟೀಕಿಸಿದರು.
ಕಳೆದ ಭಾನುವಾರ ಮಹಾರಾಷ್ಟ್ರದ ನಾಸಿಕ್‌ನ ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿರುವ ಟೋಲ್ ಪ್ಲಾಜಾವನ್ನು ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಪಕ್ಷದ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರ ಪುತ್ರ ಎಂಎನ್‌ಎಸ್ ನಾಯಕ ಅಮಿತ್ ಠಾಕ್ರೆ ಅವರನ್ನು ಟೋಲ್ ಬಳಿ ತಡೆದ ನಂತರ, ಪಕ್ಷದ ಕಾರ್ಯಕರ್ತರು ಬೂತ್ ಮೇಲೆ ದೊಣ್ಣೆ, ಕಟ್ಟಿಗೆಗಳು, ಬ್ಯಾಟ್‌ಗಳಿಂದ ಸಿನ್ನಾರ್ ಟೋಲ್ ಪ್ಲಾಜಾದಲ್ಲಿ ದಾಂಧಲೆ ನಡೆಸಿದ್ದರು. ತಮ್ಮ ನಾಯಕರನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಕಾಯಿಸಿದ ಕಾರಣ ಕಾರ್ಯಕರ್ತರು ಕೋಪಗೊಂಡಿದ್ದರು.
ಇದನ್ನೂ ಓದಿ:ಟ್ರಾಫಿಕ್ ಜಾಮ್... ಹಂತ ಹಂತವಾಗಿ ಲಾಗೌಟ್: ಐಟಿ ಕಂಪನಿಗಳಿಗೆ ಪೊಲೀಸರ ಸಲಹೆ