ನವದೆಹಲಿ: ರೈಲ್ವೆ ಟಿಕೆಟ್ಗಳ ಮಾರಾಟದಲ್ಲಿ ಏಜೆಂಟರ್ಗಳನ್ನು ನಿಯಂತ್ರಿಸುವ ಸಲುವಾಗಿ ರೈಲ್ವೆ ಇಲಾಖೆ ಹೊಸ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಇನ್ಮುಂದೆ ಆನ್ಲೈನ್ ಟಿಕೆಟ್ ಬುಕ್ ಮಾಡುವ ವ್ಯಕ್ತಿಗಳು ಆಧಾರ್, ಪ್ಯಾನ್ ಕಾರ್ಡ್ ಅಥವಾ ಪಾಸ್ಪೋರ್ಟ್ ಅನ್ನು ಕಡ್ಡಾಯವಾಗಿ ಟಿಕೆಟ್ನೊಂದಿಗೆ ಲಿಂಕ್ ಮಾಡುವಂಥಹ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾಗಿದೆ.
ರೈಲ್ವೆ ರಕ್ಷಣಾ ಪಡೆಯ ಡೈರೆಕ್ಟರ್ ಜನರಲ್ ಅರುಣ್ ಕುಮಾರ್ ಈ ಘೋಷಣೆ ಮಾಡಿದ್ದು, ಮಾಧ್ಯಮಗೋಷ್ಟಿಯಲ್ಲಿ ಮಾತನಾಡುತ್ತಾ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡುವ ವ್ಯಕ್ತಿಗಳು ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ಟಿಕೆಟ್ ಖರೀದಿಸಬೇಕಾದರೆ ಯಾವುದಾದರೂ ಒಂದು ಗುರುತಿನ ಚೀಟಿಯ ಲಿಂಕ್ ಮಾಡುವ ವ್ಯವಸ್ಥೆ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಈ ಮೊದಲು ಏಜೆಂಟರ್ಗಳ ವಿರುದ್ಧ ಕೈಗೊಂಡ ಕ್ರಮ ಅಷ್ಟೇನೂ ಪರಿಣಾಮ ಬೀರಲಿಲ್ಲ ಎಂದು ಅರುಣ್ ಕುಮಾರ್ ಒಪ್ಪಿಕೊಂಡಿದ್ದು, ಗುರುತಿನ ಚೀಟಿ ಕಡ್ಡಾಯ ಮಾಡುವ ಬಗ್ಗೆ ಆಧಾರ್ ಪ್ರಾಧಿಕಾರದೊಂದಿಗೆ ಚರ್ಚಿಸಲಾಗುತ್ತಿದೆ. ಪ್ಯಾನ್ಕಾರ್ಡ್ ಮತ್ತು ಪಾಸ್ಪೋರ್ಟ್ ಪ್ರಾಧಿಕಾರಗಳೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಮಾಸ್ಕ್ ಹಾಕದ ಗ್ರಾಹಕನ ಗುಂಡು ಹಾರಿಸಿದ ಬ್ಯಾಂಕ್ ಭದ್ರತಾ ಸಿಬ್ಬಂದಿ!
2018 ರಿಂದ ಮೇ 2021ರವರೆಗೆ ಆರ್‌ಪಿಎಫ್ ಸುಮಾರು 14,257 ದಲ್ಲಾಳಿಗಳಿಂದ ಸುಮಾರು 28.34 ಕೋಟಿ ರೂಪಾಯಿ ಮೌಲ್ಯದ ಟಿಕೆಟ್‌ಗಳನ್ನು ವಶಪಡಿಸಿಕೊಂಡಿದೆ. ಕಳ್ಳತನ, ಕಿರುಕುಳ ಮತ್ತು ಅಕ್ರಮ ನಿಲುಗಡೆಗಳ ದೂರುಗಳನ್ನು ದಾಖಲಿಸಲು ಗ್ರಾಹಕರಿಗೆ ಅವಕಾಶ ನೀಡುವ ಮೊಬೈಲ್ ಅಪ್ಲಿಕೇಶನ್ ಹೊರತರುವ ಚಿಂತನೆ ನಡೆಸಲಾಗುತ್ತಿದೆ. ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ವಿಚಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಅರುಣ್ ಕುಮಾರ್ ಭರವಸೆ ನೀಡಿದ್ದಾರೆ.