ಮುಂಬೈ(ಮಹಾರಾಷ್ಟ್ರ): ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಹೋರಾಡಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಕೈಜೋಡಿಸಿ, ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವ ಕೆಲಸ ಮಾಡಬೇಕು ಎಂದು ಶಿವಸೇನೆ ಸಲಹೆ ನೀಡಿದೆ.
ಶಿವಸೇನೆಯ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದು, ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರ ನೀತಿಗಳ ವಿರುದ್ಧ ನಿರಂತರವಾಗಿ ಆಕ್ರಮಣ ಮಾಡುತ್ತಿರುತ್ತಾರೆ. ಆದರೆ ಅದು ಟ್ವಿಟರ್ಗೆ ಮಾತ್ರ ಸೀಮಿತವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಮಹಾರಾಷ್ಟ್ರದ ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಅಧಿಕಾರ ಹಂಚಿಕೊಂಡಿರುವ ಶಿವಸೇನೆ ಪ್ರಧಾನಿ ನರೇಂದ್ರ ಮೋದಿಯವರ ಬಾಡಿ ಲಾಂಗ್ವೇಜ್ ಬದಲಾಗಿದೆ ಎಂದಿದ್ದು, ದೇಶದ ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ಮೋದಿಗೆ ತಿಳಿದಿದೆ. ವಿರೋಧ ಪಕ್ಷ ಬಲಿಷ್ಠವಾಗಿರದ ಕಾರಣದಿಂದ ತನಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ಅರಿತಿದ್ದಾರೆ ಎಂದು ಹೇಳಿದೆ.
ಶರದ್ ಪವಾರ್ ಮಂಗಳವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ), ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷ, ರಾಷ್ಟ್ರೀಯ ಲೋಕ ದಳ ಮತ್ತು ಎಡಪಂಥೀಯರು ಸೇರಿದಂತೆ ಎಂಟು ವಿರೋಧ ಪಕ್ಷಗಳ ನಾಯಕರ ಸಭೆಯನ್ನು ದೆಹಲಿಯ ತಮ್ಮ ನಿವಾಸದಲ್ಲಿ ಆಯೋಜಿಸಿದ್ದರು. ಈ ಸಭೆ ತೃತೀಯ ರಂಗ ಎಂಬ ಪರಿಕಲ್ಪನೆಯ ಹೊರತಾಗಿರುವ ರಾಜಕೀಯೇತರ ಸಭೆ ಎಂದು ಕೆಲವು ನಾಯಕರು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಜುಲೈ 31 ರೊಳಗೆ 12ನೇ ತರಗತಿ ಫಲಿತಾಂಶ ಪ್ರಕಟಿಸಿ: ರಾಜ್ಯ ಶಿಕ್ಷಣ ಮಂಡಳಿಗಳಿಗೆ ಸುಪ್ರೀಂ ಸೂಚನೆ
ವಿರೋಧ ಪಕ್ಷದ ನಾಯಕರ ಸಭೆಯನ್ನು ರಾಹುಲ್ ಗಾಂಧಿ ಆಯೋಜಿಸಬೇಕಾಗಿತ್ತು. ಶರದ್ ಪವಾರ್ ಎಲ್ಲಾ ಪಕ್ಷಗಳನ್ನು ಒಂದುಗೂಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ನಾಯಕತ್ವದ ವಿಚಾರಕ್ಕೆ ಬಂದರೆ ಕಾಂಗ್ರೆಸ್ ಅನ್ನು ಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ಸ್ವತಃ ಕಾಂಗ್ರೆಸ್ ಪಕ್ಷದಲ್ಲಿ ರಾಷ್ಟ್ರಾಧ್ಯಕ್ಷರಿಲ್ಲ ಎಂದು ಸಾಮ್ನಾ ವ್ಯಂಗ್ಯವಾಡಿದೆ.