ಪಾಟ್ನಾ(ಬಿಹಾರ): ಮೋದಿ ಉಪನಾಮ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗೆ ಬಿಹಾರದ ಪಾಟ್ನಾ ಹೈಕೋರ್ಟ್ ಮೇ 15 ರವರೆಗೆ ತಡೆ ನೀಡಿದೆ. ಇದರಿಂದ ಸೂರತ್ ಕೋರ್ಟ್ ಶಿಕ್ಷೆಯ ಬಳಿಕ ಆತಂಕದಲ್ಲಿದ್ದ ಮಾಜಿ ಸಂಸದನಿಗೆ ರಿಲೀಫ್ ಸಿಕ್ಕಂತಾಗಿದೆ.
ಮೋದಿ ಉಪನಾಮ ಹೇಳಿಕೆಯ ವಿರುದ್ಧ ಬಿಜೆಪಿಯ ರಾಜ್ಯಸಭಾ ಸಂಸದ ಹಾಗೂ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದರ ವಿಚಾರಣೆ ನಡೆಸಿದ್ದ ಪಾಟ್ನಾದ ಕೆಳಹಂತದ ಕೋರ್ಟ್ ಏಪ್ರಿಲ್ 25 ರಂದು ರಾಹುಲ್ ಖುದ್ದು ಹಾಜರಾತಿಗೆ ಸೂಚಿಸಿತ್ತು. ಕಾಂಗ್ರೆಸ್ ನಾಯಕ ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನು ಓದಿ:ರಾಜ್ಯ ಬಿಜೆಪಿ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ : ರಾಹುಲ್ ಗಾಂಧಿ ವಾಗ್ದಾಳಿ
ಇಂದು ರಾಹುಲ್ ಗಾಂಧಿ ಸಲ್ಲಿಸಿದ ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂದೀಪ್ ಕುಮಾರ್ ಅವರಿದ್ದ ಪೀಠ ವಿಚಾರಣೆಗೆ ತಡೆ ನೀಡಿದೆ. ಅಲ್ಲದೇ, ಮುಂದಿನ ವಿಚಾರಣೆವರೆಗೆ ಯಾವುದೇ ಆದೇಶ ನೀಡುವಂತಿಲ್ಲ ಎಂದು ಆದೇಶಿಸಿದೆ. ಇದು ಕಾಂಗ್ರೆಸ್ ನಾಯಕನನ್ನು ಮತ್ತೊಂದು ಸಂಕಷ್ಟದಿಂದ ಪಾರು ಮಾಡಿದೆ.
ಮಾನಹಾನಿ ಪ್ರಕರಣದ ಹಿನ್ನೆಲೆ: 2019 ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಕರ್ನಾಟಕದ ಕೋಲಾರದಲ್ಲಿ ಮೋದಿ ಹೆಸರು ಬಳಸಿಕೊಂಡು ಟೀಕೆ ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಬಿಹಾರದ ಹಿರಿಯ ಬಿಜೆಪಿ ನಾಯಕ ಹಾಗೂ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಅವರು ಪಾಟ್ನಾದ ಸಿವಿಲ್ ಕೋರ್ಟ್‌ನಲ್ಲಿ ದೂರು ಸಲ್ಲಿಸಿದ್ದರು.
ಇದನ್ನು ಓದಿ:ಬಸವಣ್ಣನ ಐಕ್ಯಮಂಟಪಕ್ಕೆ ನಾಳೆ ರಾಹುಲ್ ಗಾಂಧಿ ಭೇಟಿ.... ಎಂ ಬಿ ಪಾಟೀಲ್
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ನ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿಗೆ ಈಗಾಗಲೇ 2 ವರ್ಷಗಳ ಶಿಕ್ಷೆ ವಿಧಿಸಿದೆ. ಇದರಿಂದಾಗಿ ಅವರು ಸಂಸತ್ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. ಶಿಕ್ಷೆಯ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಅರ್ಜಿಯು ಸಹಿತ ತಿರಸ್ಕಾರವಾಗಿದೆ. ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರೂ ಕಾಂಗ್ರೆಸ್ ನಾಯಕನಿಗೆ ಜಾಮೀನು ಮಂಜೂರು ಮಾಡಲಾಗಿದೆ. ಇದೀಗ ಇದೇ ಪ್ರಕರಣದಲ್ಲಿ ಪಾಟ್ನಾ ನ್ಯಾಯಾಲಯದಿಂದ ರಿಲೀಫ್ ಪಡೆದಿದ್ದಾರೆ.
ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸ್ತಾರಾ?: ಮಾನನಷ್ಟ ಪ್ರಕರಣದಲ್ಲಿ ಸೂರತ್ ಸೆಷನ್ಸ್ ನ್ಯಾಯಾಲಯದಿಂದ ಶಿಕ್ಷೆಗೆ ತಡೆಯಾಜ್ಞೆ ಸಿಗದ ಕಾರಣ ರಾಹುಲ್ ಗಾಂಧಿ ಅವರ ಮುಂದೆ ಇರುವ ಆಯ್ಕೆ ಹೈಕೋರ್ಟ್ ಮಾತ್ರ ಆಗಿದೆ. ತಮಗೆ ನೀಡಲಾದ ಶಿಕ್ಷೆಗೆ ತಡೆ ನೀಡಬೇಕು ಎಂದು ಅವರು ಹೈಕೋರ್ಟ್ಗೆ ಮತ್ತೆ ಮೇಲ್ಮನವಿ ಅರ್ಜಿ ಸಲ್ಲಿಸಬಹುದು. ಮೇಲ್ಮನವಿ ಅರ್ಜಿಯನ್ನು ಯಾವಾಗ ಸಲ್ಲಿಸಬೇಕು ಎಂಬುದನ್ನು ಮುಂದೆ ನಿರ್ಣಯಿಸಲಾಗುವುದು ಎಂದು ರಾಹುಲ್ ಪರ ವಕೀಲರು ತಿಳಿಸಿದ್ದರು.
ಇದನ್ನೂ ಓದಿ: ಮಾನಹಾನಿ ಕೇಸ್: ಶಿಕ್ಷೆ ತಡೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ